ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಫೆಬ್ರವರಿ 10, 2018

ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯಂ

ರಾಘವಾಂಕ ವಿರಚಿತ   
ಹರಿಶ್ಚಂದ್ರ ಕಾವ್ಯಂ

ಪ್ರಥಮ ಸ್ಥಲಂ

ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ ||೧||

ಜಡೆಯಿಡುಕುಱೆಡೆಯಡೆಯೊಳಡಿಯಿಡುವ ಕಡಲತಡಿ
ವಿಡಿದುಡುಗಡಣದೊಡೆಯನೊಡಲೊಡಕು ನಡನಡುಗಿ
ಬಡಕರಿಸಿ ಮಿಡುಮಿಡುಕಲಡಿಗಡಿಗೆ ಜಡಿಜಡಿದು ಪಡಪಡಿಪ ನಡುನಯನದ
ಮಡುವಿಡುವ ಜಲಧಿಯಂ ಕಡೆವ ಕಡೆಯೊಳ್ಮೂಡಿ
ಘುಡುಘುಡಿಸಿ ಪಡೆಯ ಪಡಲಿಡೆ ಕೆಡಪುವುದ ತುಡುಕಿ
ಪಿಡಿದೊಡನೆ ಪೊಸೆದು ಕೊರಳೆಡೆ ತೊಡೆದ ಹಂಪೆಯ ಮೃಡಂ ಬಿಡದೆ ಸಲಹುಗೆಮ್ಮ||೨||

ತರುಣಶಶಿ ಮಲ್ಲಿಕಾಮಾಲೆ ಕೆಂಜೆಡೆದುರುಬು
ವುರಿಗಣ್ಣು ಕತ್ತುರಿಯ ಬೊಟ್ಟು ಕಪಿಲಾಕ್ಷಿ ಸರ
ಸಿರುಹನಯನಂ ನಾಗಕುಂಡಲಂ ಪೊನ್ನೋಲೆಯೆಸೆವ ಕಱೆ ರನ್ನದಾಳಿ
ಸುರುಚಿರಸ್ಫಟಿಕಹಾರಂ ಹಾರಮಪ್ಪ ಕುಚ
ವರಪಯೋಧರಮಜಿನವಸನಂ ದುಕೂಲವಾ
ಕರಶೂಲಮಬುಜದೊಡರುಂ ನೇವುರಂ ಮೆಱೆವ ದೇವನೆಮ್ಮಂ ಸಲಹಲಿ ||೬||

ವಾಣಿಯಱಿವಿನ ಬೆಳಗು ಮುಕುತಿವನಿತೆಯ ಮುಡಿಯ
ಮಾಣಿಕಂ ಸರ್ವಮಂತ್ರಾದಿ ಪಂಚಾಕ್ಷರಿಯ
ಪ್ರಾಣ ಮಂಗಳದ ಮನೆ ದೇವಲೋಕದ ಜನ್ಮ ಭೂಮಿ ತಾವಲೆಗಣ್ಣನ
ರಾಣಿಯೆಸೆವೋಲೆವಾಗ್ಯ  ಸರ್ವಸಿದ್ಧಿಗಳ
ತಾಣಂ ವಿರೂಪಾಕ್ಷನುನ್ನತೈಶ್ವರ್ಯದ
ಕ್ಷೋಣಿ ಪಂಪಾಂಬಿಕೆ ಮದೀಯ ಮತಿಗೀಗೆ ಪ್ರಸನ್ನತೆಯನುತ್ಸಶದೊಳು||೭||

ವೇದ ನಾಲ್ಕಱೊಳು ಹದಿನಾಱು ಶಾಸ್ತ್ರಂಗಳೊಳು
ವಾದಿಸುವ ಹದಿನೆಂಟು ಪೌರಾಣದೊಳು ಕೇಳ್ದು
ಶೋಧಿಸಿದೆ ತಿಳಿದೆ ತೂಗಿದೆನೊರೆದೆನಾನಯ್ಯ ಶ್ರೀಗುರುವಿರೂಪಾಕ್ಷನ
ಪಾದವೇ ದಿವ್ಯವಿದಱೊಳಗೊಂದು ಕುಂದಿಲ್ಲ
ಭೇದಿಸುವೊಡೀ ಕೃತಿಗೆ ಪ್ರತಿಯಿಲ್ಲ ಹಂಪೆಯ ಮ
ಹಾದೇವನಾತ್ಮಜನ ರಾಘವಾಂಕನ ಕಾವ್ಯ ತರ್ಕಿಗಿಕ್ಕಿದ ಮುಂಡಿಗೆ||೧೩||

ಮನವಚನಕಾಯದೊಳಗೊಮ್ಮೆಯುಂ ಭಾಳಲೋ
ಚನನಲ್ಲದೆ ಪೊಗಳದುದ್ಭಟಯ್ಯನ ಮಯೂ
ರನ ಕಾಳಿದಾಸನ ಹಲಾಯುಧನ ಕೇಶಿರಾಜನ ಮಲುಹಣನ ಬಾಣನ
ವಿನುತ ಭೋಜನ ಭಲ್ಲಟನ ಭಾರವಿಯ ಪದವ
ನೆನೆದು ಬಲಗೊಂಡು ತೊಡಗಿದೆನೀ ಮಹಾಕೃತಿಯ
ನೆನಗೆ ನೆಲವಾಗಿ ನಡೆಸುಗೆ ರಸಂಗೊಡುಗೆ ತಿದ್ದುಗೆ ಸುನಿರ್ವಿಘ್ನದಿಂ ||೧೪||

ಕೃತಿಗೆ ನಾಮಂ ಹರಿಶ್ಚಂದ್ರಚಾರಿತ್ರವೀ
ಕೃತಿಗೊಡೆಯನಮಳಪಂಪಾವಿರೂಪಾಕ್ಷನೀ
ಕೃತಿಗೆ ಪಾಲಕರು ಲೋಕದ ಭಕ್ತಜನರಿದಂ ಪೇಳ್ದಾತನಾರೆಂದೊಡೆ
ಚತುರಕವಿರಾಯ ಹಂಪೆಯ ಹರೀಶ್ವರನ ವರ
ಸುತನುಭಯಕವಿ ಕಮಲರವಿ ರಾಘವಾಂಕಪಂ
ಡಿತನೆಂದೊಡೀ ಕಥಾರಸದ ಲಹರಿಯನು ಬಣ್ಣಿಸದರಾರೀ ಜಗದೊಳು||೧೫||

ವಸುಧಾಧಿಪತಿ ಹರಿಶ್ಚಂದ್ರ ಘನಸತ್ಯನೆಂ
ದೊಸೆದು ವಾಸಿಪ್ಠನಿಂದ್ರಗೆನಲು ಕೌಶಿಕಂ
ಹುಸಿಮಾಳ್ಪೆನೆಂದು ಭಾಷೆಯನಿತ್ತು ಧರೆಗೆ ಬಂದವನಿಪನ ಸತಿಪುತ್ರರ
ಅಸುವಂತ್ಯವೆನೆ ನಿಗ್ರಹಂಮಾಡಿಯೊಪ್ಪದಿರೆ
ಶಶಿಮೌಳಿ ಶ್ರೀವಿಶ್ಶನಾಥ ಭೂಪಂಗೆ ಕರು
ಣಿಸಿ ಸಕಲಸಾಮ್ರಾಜ್ಯವಿತ್ತಾತನಂ ಮೆಱೆದ ಕೃತಿ ಪುಣ್ಯದಾಕೃತಿಯಿದು||೧೭||

ನಡೆವರೆಡಹದೆ ಬಱುಬರೆಡಹುವರೆ ಕಾವ್ಯಮಂ
ನಡೆಸುವಾತಂ ರಸಾವೇಶ ಮಱಹಾಲಸ್ಯ
ವೆಡೆಗೊಳಲು ತಪ್ಪುಗಲ್ಲದೆ ಕಾವ್ಯಕರ್ತೃ ತಪ್ಪುವನೆವೊಂದೆರಡೆಡೆಯೊಳು
ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ
ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆ
ಯೊಡೆವುದೇ ಬೇನೆಯಱಿಯದ ನೀರಸರನೇಕೆಪುಟ್ಟಿಸಿದನಬುಜಭವನು||೨೩||

ರೋಗಿ ಹಳಿದೊಡೆ ಹಾಲು ಹುಳಿಯಪ್ಪುದೇ ಹಗಲ
ಗೂಗೆ ಕಾಣದೊಡೆ ರವಿ ಕಂದುವನೆ ಕಂಗುರುಡ
ನೇಗೈದುವುಂ ಕಾಣದೊಡೆ ಮುಕುರ ಕೆಡುವುದೇ ದುರ್ಜನರು ಮೆಚ್ಚದಿರಲು
ನಾಗಭೂಷಣನ ಕಾವ್ಯಂ ಕೆಡುವುದೇ ಮರುಳೆ
ಹೋಗಲಾ ಮಾತದೇಕಂತಿರಲಿ ಕಡೆತನಕ
ಮೇಗುತ್ತರೋತ್ತರವನೀವ ಭಾಷೆಗಳನವಧರಿಸುವುದುಸಾಹಿತ್ಯರು||೨೭||

ತನುಲುಚಿಯ ಮುಂದೆ ದಿನಪನ ಕಾಂತಿ ಕಪ್ಪಕ
ಪ್ಪನೆ ಕೋಪದಿದಿರೊಳೂರ್ವಾನಳಂ ತಣ್ಣತ
ಣ್ಣನೆ ಕೊಡುವ ಕೈಯಿದಿರೊಳಮರತರು ಮೆಲ್ಲಮೆಲ್ಲನೆ ಮೋಹನವನಪ್ಪಿದ
ಘನರೂಪಿನಿದಿರೊಳಂಗಜರೂಪು ನೊಪ್ಪನೊ
ಪ್ಪನೆ ಗಭೀರತೆಯಿದಿರೊಳಂಬುನಿಧಿ ತೆಳ್ಳತೆ
ಳ್ಳನೆ ಶಾಂತಿಯಿದಿರ ಶಶಿ ಬೆಚ್ಚಬೆಚ್ಚನೆಯೆನೆ ಹರಿಶ್ಚಂದ್ರನೆಸೆದಿರ್ದನು||೪೧||

ವರರೂಪಿನೊಳು ರತಿಗೆ ಹೊಣಕೆ ಸೌಭಾಗ್ಯದೊಳು
ಸಿರಿಗೆ ಹೊಯಿಕೈ ಜಾಣಿನೊಳು ವಾಣಿಗಿಮ್ಮಿಗಿಲು
ಚರಿತದೊಳು ಗಂಗೆಗಲಗಣಸು ಪತಿಭಕ್ತಿಯೊಳರುಂಧತಿಗೆ ಸರಿ ಜಸದೊಳು
ಪರಮರೋಹಿಣಿಗೆ ಹೆಗಲೆಣೆ ಪುಣ್ಯದೊಳು ಸ್ವಧಾ
ತರುಣಿಗೋರಗೆ ವಂದ್ಯತೆಯೊಳು ಗಾಯತ್ರಿಗೊರೆ
ದೊರೆಯೆನಿಸಿ ಮೆಱೆವಳು ಹರಿಶ್ಚಂದ್ರನೃಪನರಸಿ ಚಂದ್ರಮತಿ ಭೂತಳದೊಳು||೪೪||

ಮಸಳಿಸದ ತೇಜ ಮಾಸದ ಕೀರ್ತಿ ಕಲಿಹುಗದ
ಹೆಸರಿಂಗದೋಜೆ ಕೊರಗದ ದರ್ಪವುಗದ ಬಗೆ
ಹುಸಿಹುಗದ ನುಡಿ ಮಾಯೆ ಮುಸುಕದಱಿವಾಲಸ್ಯವಡಿಯಿಡದ ಪರಮಭಕ್ತಿ
ನಸುಲೋಭ ನಡದ ಸಿರಿ ಭೀತಿ ಬೆರಸದ ವೀರ
ದೆಸಕವಿದಿರೊಗೆಯದುನ್ನತಿ ಸಹಜವೆನಿಸಿ ರಾ
ಜಿಸುತಂ ಹರಿಶ್ಚಂದ್ರಭೂಭುಜಂ ಸುಖದೊಳಿರಲಿತ್ತಲಮರಾವತಿಯೊಳು||೪೯||

ಸಪ್ತಮ ಸ್ಥಲಂ

ಸೂಚನೆ: ಭೂಪ ಸತ್ಕುಲದೀಪನೊಡನೆ ವಿಶ್ವಾಮಿತ್ರ
ಪಾಪಿ ಕೋಪಿಸಿ ಹೊಲತಿಯರನು ಪುಟ್ಟಿಸಿ ಕಳುಹೆ
ಭಾಪು ಸ್ಥಿರಂಜೀವ ಸತ್ತಿಗೆಯನೀಯಲ್ಲದಡೆ ಗಂಡನಾಗೆಂದರು

ಹಂದಿಯಂ ಕಾಣುಹತಡಂ ಕೋಪಗಿಚ್ಚು ಭುಗಿ
ಲೆಂದು ಜಪ ಜಾಱಿ ತಪ ತಗ್ಗಿ ಮತಿ ಗತವಾಗಿ
ಸಂದ ಯೋಗಂ ಹಿಂಗಿ ದಯೆ ದಾಂಟಿ ನೀತಿ ಬೀತಾನಂದವಱತು ಹೋಗಿ
ಹಿಂದ ನೆನೆದುರಿದೆದ್ದು ಸಿಕ್ಕಿದನಲಾ ಭೂಪ
ನಿಂದು ನಾನಾಯ್ತು ತಾನಾಯ್ತು ಕೆಡಿಸದೆ ಮಾಣೆ
ನೆಂದು ಗರ್ಜಿಸುವ ಕೌಶಿಕನ ಹೂಂಕಾರದಿಂದೊಗೆದರಿಬ್ಬರು ಸತಿಯರು||೧||

ಮುನಿಗೆ ಹೊಲೆಯಾವುದತಿಕೋಪ ಬದ್ಧದ್ವೇಷ
ವನಿಮಿತ್ತವೈರವದಱಿಂದ ಹುಟ್ಟಿದರಾಗಿ
ವನಿತೆಯರು ಕಡೆಗೆ ಹೊಲತಿಯರಾಗಿ ಕೆಲಸಾರಿ ನಿಂದು ಬೆಸನಾವುದೆನಲು
ಜನಪತಿಹರಿಶ್ಚಂದ್ರ ಬಂದು ನಮ್ಮಯ ತಪೋ
ವನದೊಳೈದನೆ ಹೋಗಿ ಸರ್ವಬುದ್ಧಿಗಳೊಳಾ
ತನ ಮರುಳುಮಾಡುತಿರಿ ಹೋಗಿಯೆಂದಟ್ಟಿದಂ ದುರ್ಮಂತ್ರಬಲವಂತನು ||೨||

ಹೊಸಕುಟಿಲಕುಂತಲದ ಚಂಚಲಾಕ್ಷಿಗಳ ಕ
ರ್ಕಶಕುಚದ ಶಿಥಿಲಮಧ್ಯದ ಲಘುಶ್ವಾಸದ
ತ್ಯಸಮರಾಗಾಧರದ ಗೂಢನಾಭಿಯ ಮೀಱಿ ಕೊಬ್ಬಿದ ನಿತಂಬಯುಗದ
ಅಸದಳದ ಜಡಗತಿಯ ಬೆಳುನಗೆಯ ವಕ್ರವಾ
ಕ್ಯಸಮೂಹದವಗುಣಂಗಳ ಸಂಗದಿಂ ಕುಲಂ
ಹಸಗೆಟ್ಟನಾಮಿಕೆಯರಾದರಲ್ಲದೆ ಸಂಗವಾರ ಕುಲಮಂ ಕೆಡಿಸದು ||೩||

ಸಂದ ಕಾರಿರುಳ ಕನ್ನೆಯರು ಹಗಲಂ ನೋಡ
ಲೆಂದು ಬಂದರೊ ಸುರಾಸುರರಬುಧಿಯಂಮಥಿಸು
ವಂದು ಹೊಸವಿಷದ ಹೊಗೆವೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ
ನೊಂದು ಮಾನಿಸರಾದರೋ ಕಮಲಜಂ ನೀಲ
ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ
ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನಿದ್ದೆಡೆಗೆ||೪||

ಮಾಯದಬಲೆಯರು ಕಾಣುತ್ತ ಮಝ ಭಾಪಧಟ
ರಾಯ ರಾಯಝಳಮಪ್ಪ ರಾಯ ದಳವುಳಕಾಱ
ರಾಯ ಕಂಟಕರಾಯ ರಾಯಜಗಜಟ್ಟಿ ರಾಯದಲ್ಲಣ ರಾಯಕೋಳಾಹಳ
ರಾಯಭುಜಬಲಭೀಮ ರಾಯಮರ್ದನರಾಯ
ಜೀಯ ಸ್ಥಿರಂಜೀವಯೆಂದು ಕೀರ್ತಿಸಿ ಗಾಣ
ನಾಯಕಿಯರಂದು ದಂಡಿಗೆವಿಡಿದು ಪೊಡಮಟ್ಟು ಹಾಡಲುದ್ಯೋಗಿಸಿದರು||೫||

ಕ್ಕಲನ ಬಳಿವಿಡಿದು ಸುತ್ತಿದಾಸಱನು ಮುನಿ
ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ
ಮುಕ್ಕಣ್ಣನೆನಿಪ ಗುರುವಾಜ್ಞೆಗೆಟ್ಟಳನಲ್ಲದೆ ಕನಸ ಕಂಡ ಭಯವ
ಮಿಕ್ಕು ಮಱೆವಂತಡಸಿ ಕವಿವ ಗತಿಗಳ ಸೊಗಸ
ನಕ್ಕಿಸದೆ ಸಮಯ ಸಮಯದ ಪಸಾಯಕ್ಕೆ ಮನ
ವುಕ್ಕಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ಚಂದ್ರನು||೭||

ಬಡತನದ ಹೊತ್ತಾನೆ ದೊರಕಿ ಫಲವೇನು ನೀ
ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ
ಯಡಸಿ ಕೆಡೆದಿಹ ಹೊತ್ತು ರಂಭೆ ದೊರಕೊಂಡಲ್ಲಿ ಫಲವೇನು ಸಾವ ಹೊತ್ತು
ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು
ಹೊಡೆದು ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ
ದೊಡಿಗೆಗಳನಿತ್ಯು ಫಲವೇನು ಭೂನಾಥ ಹೇಳೆನುತ ಮತ್ತಿಂತೆಂದರು ||೮||

ಕಡಲೊಳಾಳ್ವಂಗೆ ತೆಪ್ಪವನು ದಾರಿದ್ರಂಗೆ
ಕಡವರವನತಿರೋಗಿಗಮೃತಮಂ ಕೊಟ್ಟೊಡವ
ರಡಿಗಡಿಗದಾವಹರುಷವನೆಯ್ಯದುತಿಪ್ಪರವರಂ ಪೋಲ್ವರೀ ಪೊತ್ತಿನ
ಸುಡುಸುಡನೆ ಸುಡುವ ಬಿಱುಬಿಸಿಲ ಸೆಕೆಯುಸಿರ ಬಿಸಿ
ಹೊಡೆದುದುರಿಹೊತ್ತಿಬಾಯ್ಬತ್ತಿ ಡಗೆ ಸುತ್ತಿ ಸಾ
ವಡಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು ||೯||

ರವಿಕುಲದ ಪೀಳಿಗೆಯೊಳೊಗೆದ ರಾಯರ್ಗೆ ಪ
ಟ್ಟವ ಕಟ್ಟುವಂದಿದಿಲ್ಲದೊಡರಸುತನ ಸಲ್ಲ
ದವನಿಯೊಳು ಯುದ್ಧರಂಗದೊಳಿದಂ ಕಂಡ ಹಗೆಗಳು ನಿಲ್ಲರಿದಱ ಕೆಳಗೆ
ಕವಿವ ನೆಳಲೊಳಗಾವನಿರ್ದನಾತಂಗೆ ತಾಂ
ತವಿಲೆಡರು ಬಡತನ ನಿರೋಧವಪಕೀರ್ತಿ ಪರಿ
ಭವಭಯಂ ಹರೆವುದಿದನಱಿದಱಿದು ಸತ್ತಿಗೆಯ ಕೊಡಬಹುದೆಹೇಳೆಂದನು||೧೦||

ಅನುನಯದೊಳೆಲ್ಲಮಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವಮಂ
ಮನವಾಱೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು ನೀನೀಗ ಪೇ
ಳ್ದನಿತಱೊಳು ಬೇಡಿದಡೆ ಕೊಡಬೇಡ ಕೊಡೆಯನೀ
ಯೆನೆ ಲೋಭವೇಕರಸಯೆನಲಿದಲ್ಲದೆ ಬೇಱೆ ಮಾತೆಪಿತರಿಲ್ಲೆಂದನು||೧೩||

ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ
ವಾಗಿ ಬಂದುದಱಿಂದ ತಂದೆ ಪಟ್ಟವ ಕಟ್ಟು
ವಾಗಲರ್ಚಿಸಿಕೊಂಬುದಾಗೆ ದೈವಂ ನೆಳಲ ತಂಪನೊಸೆದೀವುದಾಗಿ
ಸಾಗಿಸುವ ತಾಯ್ ಧುರದೊಳರಿಗಳಂ ನಡುಗಿಸುವು
ದಾಗಿ ಚತುರಂಗಬಲವೆನಿಸಿತೀ ಛತ್ರವೆಂ
ಬಾಗಳಿದನಱಿದಱಿದು ಬೇಡುವರನತಿಮರುಳರೆನ್ನರೇ ಮೂಜಗದೊಳು||೧೪||

ಇಳೆಯೊಳಗೆ ಹೆಸರುಳ್ಳ ದಾನಿಯೆಂಬುದನು ಕೇ
ಳ್ದೆಳಸಿ ಕಟ್ಟಾಸೆವಟ್ಟೆಯ್ತಂದು ಬೇಡಿ ನಿ
ಷ್ಫಲವಾಗದಂತೆ ನಾವತಿಮಱುಗದಂತಳಲದಂತೆ ಬಿಸುಸುಯ್ಯದಂತೆ
ತಿಳಿದು ನೀನೆಮಗೆ ವಲ್ಲಭನಾಗಿ ಚಿತ್ತದು
ಮ್ಮಳಿಕೆಯಂ ಕಳೆ ಹರಿಶ್ಚಂದ್ರಭೂನಾಥಯೆಂ
ದಳವಳಿದು ಬಾಯ್ವಿಟ್ಟು ಕೈಮುಗಿದು ನುಡಿದರೊಲವಿಂದನಾಮಿಕ ಸತಿಯರು||೧೫||

ಲಲಿತವಸುಮತಿ ಹುಟ್ಟುವಂದು ಹುಟ್ಟಿದ ಸೂರ್ಯ
ಕುಲದ ರಾಯರ್ಗೆ ವಂಶದೊಳು ಕೀರ್ತಿಯೊಳು ಭುಜ
ಬಲದೊಳೊರೆದೊರೆಯೆನಿಸಿ ಕನ್ನಿಕೆಯರಂ ಕೊಡುವ ಭೂಪರಿಲ್ಲಿಂದುತನಕ
ಹೊಲತಿಯರು ಬಂದಾವು ಸತಿಯರಾದಪ್ಪೆವೆಂ
ಬುಲಿಹವೆಂಬುದು ಬಂದ ಕಾಲಗುಣವೋ ನಿಂದ
ನೆಲದ ಗುಣವೋ ನೋಡುನೋಡೆಂದು ಕಡುಮುಳಿದು ಕೋಪಿಸಿದನವನೀಶನು ||೧೬||

ಪಾವನಕ್ಷೀರಮಂ ಕೊಡುವ ಕೆಚ್ಚಲ ಮಾಂಸ
ವಾವಲೇಸಿನಿದುಳ್ಳ ಮಧುವನೊಸೆದೀವ ನೊಳ
ವಾವಲೇಸಧಿಕ ಕಸ್ತೂರಿಯಂ ಕೊಡುವ ಮೃಗನಾಭಿ ತಾನಾವ ಲೇಸು
ದೇವರಿಗೆ ಸಲ್ಲವೇ ಉತ್ತಮಗುಣಂಗಳಿ
ರ್ದಾವ ಕುಂದಂ ಕಳೆಯಲಾಱವವನೀಶ ಕೇಳ್
ಭಾವಿಸುವೊಡಿಂದೆಮ್ಮ ರೂಪು ಜವ್ವನವಿರಲು ಕುಲದ ಮಾತೇಕೆಂದರು||೧೭||

ಅಕ್ಕಕ್ಕು ಬಚ್ಚಲುದಕಂ ತಿಳಿದಡಾರ ಮೀ
ಹಕ್ಕೆ ಯೋಗ್ಯಂ ನಾಯ್ಗೆ ಹಾಲುಳ್ಳೊಡಾವನೂ
ಟಕ್ಕೆ ಯೋಗ್ಯಂ ಪ್ರೇತವನದೊಳಗೆ ಬೆಳೆದ ಹೂವಾರ ಮುಡಿಹಕ್ಕೆ ಯೋಗ್ಯಂ
ಮಿಕ್ಕ ಹೊಲತಿಯರು ನೀವೆನೆ ನಿಮ್ಮ ಜವ್ವನದ
ಸೊಕ್ಕು ರೂಪಿನ ಗಾಡಿ ಜಾಣತನದೊಪ್ಪವೇ
ತಕ್ಕೆ ಯೋಗ್ಯಂ ರಮಿಸಿದವರುಂಟೆ ಶಿವಶಿವೀ ಮಾತು ತಾ ಹೊಲೆಯೆಂದನು||೧೮||

ಹಾಡನೊಲಿದಾಲಿಸಿದ ಕಿವಿಗೆ ಹೊಲೆಯಿಲ್ಲ ಮಾ
ತಾಡಿ ಹೊಗಳಿದ ಬಾಯ್ಗೆ ಹೊಲೆಯಿಲ್ಲ ರೂಪನೆಱೆ
ನೋಡಿದ ವಿಲೋಚನಕೆ ಹೊಲೆಯಿಲ್ಲ ಮೆಯ್ ಮುಡಿಗಳಿಂ ಸುಳಿವ ತಂಗಾಳಿಯಿಂ
ತೀಡುವ ಸುಗಂಧಮಂ ವಾಸಿಸಿದ ನಾಸಿಕಕೆ
ನಾಡೆ ಹೊಲೆಯಿಲ್ಲ ಸೋಂಕಿಂಗೆ ಹೊಲೆಯುಂಟಾಯ್ತೆ
ಕೂಡಿರ್ದ ಪಂಚೇಂದ್ರಿಯಗಳೊಳು ನಾಲ್ಕಧಮವೊಂದಧಿಕವೇ ಎಂದರು ||೧೯||

ಕಂಡಱಿವವೈಸಲೇ ನಯನೇಂದ್ರಿಯಂ ಘ್ರಾಣ
ಕೊಂಡಱಿವವೈಸಲೇ ವಾಸನೆಯ ಕರ್ಣಂಗ
ಳುಂಡಱಿವವೈಸಲೇ ಶಬ್ದಮಂ ದೂರದಿಂದಲ್ಲದವು ಮುಟ್ಟಲಿಲ್ಲ
ಭಂಡತನವೀ ಮಾತಿದಕ್ಕೆಯುಪಮಾನವೇ
ಕೆಂಡವನು ಮುಟ್ಟಿದಡೆ ಬೇವಂತೆ ಕೇಳ್ದಡಂ
ಕಂಡು ವಾಸಿಸಿದಡಂ ಬೆಂದವೇ ಕಾಳುಗೆಡೆಯದೆ ಹೋಗಿ ನೀವೆಂದನು||೨೦||

ಶಾಪದಿಂದಾದ ದುಷ್ಕುಲಂ ಸತ್ಕುಲಜ
ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂ
ಬಾಪೇಕ್ಷೆಯಿಂ ಬಂದೆವೆನಲೊಡನೆ ನಿಮಗೋಸುಗೆನ್ನ ಕುಲಮಂ ಕೆಡಿಪೆನೆ
ಪಾಪಿಗಳ ಪಾಪಮಂ ತೊಳೆವ ಗಂಗೆಗೆ ಪಾಪ
ಲೇಪವುಂಟಾಯ್ತೆ ಹೇಳರಸಯೆನೆ ಕುಲಧರ್ಮ
ವೀಪಂಥವಲ್ಲ ಕೊಡವಾಲ ಕೆಡಿಸುವೊಡಾಮ್ಲವೆನಿತಾಗಬೇಕೆಂದನು ||೨೨||

ಮಾತಿಂಗೆ ಮಾತುಗೊಡಲರಿದು ನಿನ್ನಯ ನುತ
ಖ್ಯಾತಿಗದಟಿಂಗೆ ರೂಪಿಂಗೆ ಸುರುಚಿರಗುಣ
ವ್ರಾತಕ್ಕೆ ಹರೆಯಕ್ಕೆ ಗರುವಿಕೆಗೆ ಮನಸಂದು ಮರುಳಾಗಿ ಮತಿಗೆಟ್ಟೆವು
ಓತು ಬಂದವರನುಪಚರಿಸದಿಪ್ಪುದು ನಿನಗೆ
ನೀತಿಯಲ್ಲೇಗೆಯ್ದಡಂ ಗಂಡನಾದಲ್ಲ
ದಾತುರಂ ಪೋಗದಿನ್ನೊಲಿದಂತೆ ಮಾಡು ನಿನ್ನಯ ಬೆನ್ನ ಬಿಡೆವೆಂದರು ೨೩||

ಬಳಿವಿಡಿದು ಬಂದು ಮಾಡುವುದೇನು ನಮ್ಮ ಬೆಂ
ಬಳಿಯಲೆನಿಬರು ಹೊಲೆಯರಿಲ್ಲೆಂದಡಹಗೆ ಬಿಡೆ
ವೆಳಸಿ ಮಚ್ಚಿಸಿ ಮರುಳ್ಗೊಳಿಸಿ ಮತ್ತೊಲ್ಲನವನಿಪನೆಂದು ಮೊಱೆಯಿಡುತ್ತ
ಇಳೆಯೊಳಗೆ ಸಾಱುತ್ತ ದೂಱುತ್ತ ಬಪ್ಪೆವೆನೆ
ಮುಳಿದು ಘುಡುಘುಡಿಸಿ ಕೋಪಾಟೋಪದಿಂ ಹಲ್ಲ
ಕಳೆ ಬಾಯ ಹರಿಯಕೊಯ್ ಹೊಡೆಹೊಡೆನುತ್ತೆದ್ದನುರವಣಿಸಿ ಭೂನಾಥನು||೨೪||

ತುಡುಕಿ ಚಮ್ಟಿಗೆಯಂ ಸೆಳೆದು ಪ್ರಧಾನ ಬಳಿ
ವಿಡಿದೇಳಲೊಬ್ಬೊರೊಬ್ಬರನು ಬೆನ್ನೊಡೆಯೆ ಮುಡಿ
ಹುಡಿಯೊಳಗೆ ಹೊರಳೆ ಹಲು ಬೀಳೆ ಬಾಯೊಡೆಯೆ ಮೆಯ್ ನೋಯೆ ಕಯ್ಯುಳುಕೆ ಮೀಱಿ
ಪನಡೆದಲ್ಲಿ ನಡೆದು ಹೊಕ್ಕಲ್ಲಿ ಹೊಕ್ಕೊಡೀ ಹೋ
ದೆಡೆಗೆ ಬೆನ್ನಟ್ಟಿ ರುಧಿರಂ ಬಸಿಯೆ ಹೊಯ್ದು ಹೊಗ
ರುಡುಗಲರಸಂ ತಿರುಗಲತ್ತಲವರೊಱಲುತ್ತ ಹರಿದರಾ ಮುನಿಪನೆಡೆಗೆ ||೨೫||

ಆರಮನೆಯವರೆಂದು ಕೇಳ್ದಡೆರಡನೆಯ ಪುರ
ವೈರಿ ವಿಶ್ವಾಮಿತ್ರಮುನಿಯ ಮನೆಯವರೆಂದ
ಡಾ ರಾಯನೆದ್ದು ಕಯ್ಯಾಱೆ ಸದೆಬಡಿದನೆಮ್ಮಂ ನಿರಪರಾಧಿಗಳನು
ಕಾರುಣ್ಯಚಿತ್ತದಿಂ ಕಳುಹಿ ಕೊಲಿಸಿದೆ ತಂದೆ
ವೋರಂತೆ ಕೇಳೆಂದು ಪೇಳೆ ಕೇಳ್ದೆನ್ನಯ ಮ
ನೋರಥಂ ಕೈಸಾರ್ದುದಳಲಬೇಡೆಂದು ಕೋಪಾಟೋಪದಿಂ ಹರಿದನು||೨೭||

ಅಷ್ಟಮ ಸ್ಥಲಂ

ಸೂಚನೆ :-

ವಡಬಾಗ್ನಿ ಜಡೆವೊತ್ತುದೋ ಸಿಡಿಲು ಹೊಸಭಸಿತ
ವಿಡ ಕಲಿತುದೋ ಕಾಡುಗಿಚ್ಚು ಹರಿಣಾಜಿನವ
ನುಡಕಲಿತುದೋ ಪ್ರಳಯವಹ್ನಿ ತಪವೊತ್ತುದೋ ಭಾಳಲೋಚನನ ಕೋಪ
ಕಡುಗಿ ಮುನಿಯಾಯ್ತೊ ಪೇಳೆನೆ ಕಣ್ಣ ಕಡೆ ತೋರ
ಗಿಡಿಗೆದಱೆ ಮೀಸೆಗೂದಲು ಹೊತ್ತಿ ಹೊಗೆಯೆ ಬಿಱು
ನುಡಿಗಳುರಿಯುಗುಳೆ ವಿಶ್ವಾಮಿತ್ರನುರವಣಿಸಿ ಬಂದನವನೀಶನೆಡೆಗೆ ||೧||

ಸುದತಿ ನೋಡಧಿಕ ಗುರ್ವಾಜ್ಞೆಯಂ ಮಱೆದು ಮೀ
ಱಿದ ಫಲಂ ಕಂಡ ದುಸ್ವಪ್ನದರ್ಥಂ ಬರು
ತ್ತಿದೆ ಮೂರ್ತಿಗೊಂಡು ನಮ್ಮೆಡೆಗಿಂದು ಮದನಮದಮರ್ದನಂ ಬಲ್ಲನೆನುತ
ಇದಿರೆದ್ದನರ್ಘ್ಯನವರತ್ನಂಗಳಂ ನೀಡಿ
ಪದಪಯೋಜದ ಮೇಲೆ ಹೊಡೆಗೆಡೆದ ಭೂಭುಜನ
ನೊದೆದು ಸಿಡಿಲೇಳ್ಗೆಯಿಂದಣಕಿಸಿದನಂದು ವಿಶ್ವಾಮುನಿನಾಥನು||೨||

ಹಿಂದೆ ಮಾಡಿದ ಸುಕೃತಸೂಚನೆಯ ದೇವತಾ
ವಂದನೆಯ ಸನ್ಮುನಿಪದಾಬ್ಜಭಜನೆಗಳ ಫಲ
ದಿಂದಿಂದು ನಿಮ್ಮಂಘ್ರಿಕಮಳದರ್ಶನವಾಯ್ತು ಕೃತಕೃತ್ಯನಾದೆನೆನುತ
ಸಂದೇಹವಳಿದ ಸಂತಸದಲಿಪ್ಪೆನ್ನ ನೀ
ವಿಂದೊದೆದು ಮೃದುಪಾದಪಲ್ಲವಂ ನೊಂದವೆಲೆ
ತಂದೆ ಪರುಷದ ಪ್ರತಿಮೆ ಮುನಿದೊದೆದೊಡಂ ಲೋಹ ಹೊನ್ನಾಗದಿರದೆಂದನು ||೩||

ಚರಣವೊಂದೆ ನಿನ್ನ ದೆಸೆಯಿಂದ ನೊಂದವೆಲೆ
ಧರಣೀಶ ಕೇಳೆನ್ನ ಮನಬುದ್ಧಿ ಚಿತ್ತಾಧಿ
ಕರಣವೆಲ್ಲಂ ನೊಂದು ಬೆಂದು ಕೂಳ್ಗುದಿಗೊಂಡವಿನ್ನಾಡಿ ತೋಱಲೇಕೆ
ದುರುಳುತನವೇನೇನ ಮಾಡಬೇಕದನೆಯ್ದೆ
ಭರವಸದಿ ಮಾಡಿ ಮತ್ತೀ ದುಷ್ಟತನದ ಬೋ
ಸರಿಗತನವೇಕೆಂದೊಡಯ್ಯ ಪೇಳಾಂ ನೆಗಳ್ದ ದುಷ್ಟತನವೇನೆಂದನು ||೪||  

ಬಿರುಗಾಳಿಯಂ ಬೀಸಲಮ್ಮನನಿಲಂ ಸುರಪ
ನಱೆವಳೆಗಳಂ ಕಱೆಯಲಮ್ಮನತಿ ಕಡುವಿಸಿಲ
ಕಱೆಯಲಮ್ಮಂ ತರಣಿ ದಾವಾಗ್ನಿ ಮೇರೆಯಂ ಮೀರಲಮ್ಮಂ ಲೋಕವ
ಮುಱಿವ ಜವಗಿವನ ದೂತರು ಗೀತರೆಂಬರೆ
ದ್ದೆಱಗಲಮ್ಮರು ತಪೋವನದೊಳಿಂದೆಮ್ಮ ನೀಂ
ಕೊಱಚಾಡಲೆಂದು ಬೀಡಂ ಬಿಟ್ಟೆಯಱಿದಱಿದು ನಿನ್ನ ಧೀವಶವೆಂದನು ||೫||

ಎಳಸಿ ಪುಣ್ಯಾರ್ಥದಿಂ ವಂದನೆನಿಮಿತ್ತ ಗುರು
ನಿಳಯಕ್ಕೆ ಶಿಷ್ಯನೆಯ್ತಪ್ಪುದಕೆ ಸಾಹಸದ
ಬಲವೇಕೆ ತಂದೆಯೆನೆ ನುಡಿಯೊಳು ನಯಂಬಡೆದು ಕಾರ್ಯದೊಳು ಗುರುವಿನಸುಗೆ
ಮುಳಿದು ಸರ್ವಸ್ವಾಪಹರಣಮಂ ಮಾಳ್ಪ ಕಡು
ಗಲಿತನವಿದಾವ ಪುಣ್ಯವ ಪಡೆವ ಶಿಷ್ಯತನ
ದೊಳಗು ಪೇಳೆನಲೆನ್ನ ದೆಸೆಯಿಂದ ಕೆಟ್ಟುದೇನೆಂದನು ಹರಿಶ್ಚಂದ್ರನು ||೬||

ಅರಸುಗಳಿಗುಪದೇಶವಂ ಮಾಡಿ ವಸ್ತುವಂ  
ನೆರಹಬಲ್ಲವನಲ್ಲ ನಿಜವೈರವಂ ಬಿಟ್ಟು
ಹರುಷದಿಂದಿರ್ಪಮೃಗಸಂಕುಳಂ ಸರ್ವಋತುಗಳೊಳಂ ಫಲವಿಡಿದೊಱಗುವ
ತರುಕುಲಂ ಬತ್ತದೊಂದೇ ಪರಿಯಲಿಹ ಸರೋ
ವರವೆಮ್ಮ ಧನವಿದೆಲ್ಲವನಿಱಿದು ಮುಱಿದು ಕುಡಿ
ದರೆಮಾಳ್ಪ ಒಲುಹು ಸರ್ವಸ್ವಾಪಹರಣವಲ್ಲದೆ ಬಳಿಕ್ಕೇನೆಂದನು||೭||

ಬಱಿಮುನಿಸನಿಟ್ಟುಕೊಂಡುಱುಹುವಂತಾಗಿ ನಾ
ನಿಱಿದ ಮೃಗ ಮುಱಿದ ಮರ ಕುಡಿದ ಕೊಳನಾವುದೆಲೆ
ಕಿಱುಜಡೆಯ ನೀತಿವಿದ ತೋಱಿಸೆನೆ ಘುಡುಘುಡಿಸುತೆದ್ದುಹಳಗಾಲದಂದು
ಅಱತ ಕೊಳನಂ ಕೊಳೆತು ಮುಱಿದ ಮರನಂ ನಪನ
ನುಱೆ ತಂದ ಹಲವು ಗಾಯದ ಹಂದಿಯಂ ತೋಱಿ
ಜಱೆದು ನೀನಿನ್ನಾವ ನೆವವನೊಡ್ಡುವೆ ಪಾಪಿ ಎನುತ ಮತ್ತಿಂತೆಂದನು ||೮||

ಹಿಂದೆ ಸಂಪದದೊಳುಱೆ ಗರ್ವದಿಂ ಮೆಱೆದ ಸಂ
ಕ್ರಂದನನ ಸಿರಿಯ ನೀರೊಳಗೆ ನೆರಹಿದ ಮುನಿಪ
ನಂದವಂ ಮಾಡುವೆನು ಹರನ ಹಣೆಗಣ್ಣ ಹಗ್ಗಿಯನು ಹಗೆಗೊಂಬಂದದಿಂ
ಇಂದೆನ್ನ ಹಗೆಗೊಂಡೆ ಬಿಟ್ಟ ಬೀಡೆಲ್ಲಮಂ
ಕೊಂದು ಕೂಗಿಡಿಸಿ ನೆಱೆ ಸುಟ್ಟು ಬೊಟ್ಟಿಡುವೆ ನಾ
ರೆಂದಿರ್ದೆ ನಿನ್ನ ಗುರು ಹೇಳನೇ ತನ್ನ ಸುತರಳಲ ತಿಣ್ಣವನೆಂದನು ||೯||

ಒಸೆದು ಹುಟ್ಟಿಸುವ ಪಾಲಿಸುವ ಮರ್ದಿಸುವ ಸ
ತ್ವಸಮರ್ಥನೆನಿಪ ನೀನೇ ತಪ್ಪಹೊಱಿಸಿದ ದ
ಟ್ಟಿಸುವಡಿನ್ನುತ್ತರಿಸಿ ಶುದ್ಧನಹುದರಿದಯ್ಯ ನಿಮ್ಮ ಕರುಣದ ತೊಟ್ಟಿಲ
ಹಸುಳೆಯಾಂ ಸರ್ವಾಪರಾಧಿಯಾಂ ತಂದೆ ಕರು
ಣಿಸು ದಯಂಗೆಡದಿರುದ್ರೇಕಿಸದಿರೆಂದು ಪದ
ಬಿಸುರುಹದ ಮೇಲೆ ಕೆಡಹಿದನು ನಿಜಮಣಿಮಕುಟಮಂಡಿತ ಶಿರೋಂಬುಜವನು ||೧೦||

ನೋಡಿ ವಂದಿಸಿ ಹೋಹ ಶಿಷ್ಯಂಗೆ ನೀಂ ಕೃಪೆಯ
ಮಾಡುವುದು ಹದುಳದಿಂ ಬಲ್ಲವನೆಲ್ಲವ ಹೊಳ್ಳು
ಮಾಡಬಗೆವರೆ ಹೇಳೆನಲು ಪ್ರಳಯಫಣಿಯಣಲ ಹೊಳಲೊಳಗೆ ಕೈಯ ನೀಡಿ
ದಾಡೆಯಂ ಮುಱಿಯಬಡಿವಂತೆನ್ನ ಬಸುಱಿಂದ
ಮೂಡಿರ್ದ ಕನ್ನೆಯರ ಚೆನ್ನೆಯರನಬಲೆಯರ  
ಗಾಡಿಕಾತಿಯರನಱಿದಱಿದಿಂತು ಸಾಯ ಸದೆಬಡಿವರೇ ಹೇಳೆಂದನು||೧೧||

ಬೇಗದಲಿ ನಿಮ್ಮ ಮನೆಯವರೆಂದು ಮೊಱೆಯಿಟ್ಟ
ರಾಗಿ ಕರುಣಿಸಿ ಬಿಟ್ಟೆನಲ್ಲದಿರ್ದಡೆ ಕೆಡಹಿ
ಮೂಗನರಿದೆಳೆಹೂಟೆಯಂ ಕಟ್ಟಿ ಹೆಟ್ಟವೆಳಸುವೆ ಬಟ್ಟಬಯಲೊಳೆನಲು
ಏಗೆಯ್ದರವರೊಳನ್ಯಾಯವೇನೆನಲೆನ್ನ
ಮೇಗಿರ್ದು ಸತ್ತಿಗೆಯನೀಯಲ್ಲದೊಡೆ ಗಂಡ
ನಾಗು ನೀನಾಗದೊಡೆ ಮೊಱೆಯಿಡುವೆವೆಂದರು ಮುನೀಶ ಚಿತ್ತೈಸೆಂದನು ೧೩||

ಮಿಗೆ ದಾನಿಯೆಂದು ಮನ್ನಣೆಯಱಿವ ವಿಟನೆಂದು
ಬಗೆದಾಸೆವಟ್ಟಡಂ ಕುಂದೆ ಹೇಳೆನಲು ಸ
ತ್ತಿಗೆಯನೀವರೆ ಹೊಲತಿಯರ ನೆರೆವರೇ ಎನಲು ತೀರದೆಂದಡೆ ಸಾಲದೆ
ಬಗೆ ಬೆದಱೆ ಹೊಡೆಯಲೇಕರಸಯೆನಲೆನ್ನ ನೀ
ಜಗದೊಳಗೆ ದೂಱಿದಪೆವೆಂಬರೆಯೆಂದಡಾ
ರ್ತಿಗಳೆನ್ನದಾರೆಂಬಡೆಂದಡಾನದು ನಿಮಿತ್ತ ಬಡಿದೆ ನಾನೆಂದನು ||೧೪||

ಹೊಡೆಯದಕ್ಕೇನವದಿರಂ ಹೊಡೆದ ಕೈಗಳಂ
ಕಡಿವೆ ನಿನ್ನಂ ನಚ್ಚಿ ಮಲೆತ ದೇಶವನುರುಹಿ
ಸುಡುವೆನಾ ದೇಶಕ್ಕೆ ಹಿತವಾಗಿ ಬಂದ ಮುನಿಯಂ ಮುಱಿವೆನಾ ಮುನಿಯನು
ಹಿಡಿದು ಕದನಕ್ಕೆಂದು ಬಂದಮರರಂ ಕೆಡಹಿ
ಹುಡುಕುನೀರದ್ದುವೆನ್ನಳವನಱಿಯಾ ಮುನ್ನ
ತೊಡಕಿ ತನಗಾದ ಭಂಗಂಗಳಂ ಹೇಳನೇ ನಿನಗೆ ಕಮಲಜಕಂದನು ||೧೫||

ಹರುಷದಿಂ ಶಾಂತಿ ಸತ್ಯಂ ಭೂತದಯೆಗಳಂ
ದೊರಕಿಸಿಯೆ ಕ್ರೋಧಾರ್ಥರೌದ್ರಮಿಥ್ಯಂಗಳಂ
ಪರಿಹರಿಸಿ ಬ್ರಾಹ್ಮಣೋತ್ತಮ ಮುನೀಶ್ವರರೆನಿಸಿ ನೀವೆ ಕೋಪಾಗ್ನಿಯಿಂದ
ಉರಿದೆದ್ದು ಮುನಿಗಳಂ ಕೊಂದು ಮೂಜಗವನಿ
ಟ್ಟೊರಸಿ ದೇವರ ಹಿಂಡಿ ಹಿಳಿಯಲಾನೀ ಲೋಕ
ದರಸು ದುರುಳಕ್ಷತ್ರಿಯಂ ಮಾಡಬಹುದೆ ಹೇಳೆಂದು ಕಟಕಿಯ ನುಡಿದನು ||೧೬||

ಬಿನ್ನಣದ ಕಟಕಿಯಂ ಕೇಳುತ್ತ ಕೆಟ್ಟುನುಡಿ
ದಿನ್ನು ನೀನೀ ಧರೆಯೊಳರಸುತನದಿಂದಿರ್ದ
ಡೆನ್ನೆದೆಯ ಮೇಲಿರ್ದ ದೇಶದಿಂ ತೆವಱುವೆಂ ತೆವಱಿ ಹೊಕ್ಕಲ್ಲಿ ಹೊಕ್ಕು
ಬೆನ್ನಕಯ್ಯಂ ಬಿಡದೆ ಬಂದ ಬಂದಳಲಿಸುವೆ
ನುನ್ನತಿಕೆವೆರಸಿ ಬದುಕದಡಱಿಯಬಹುದೆನುತ
ನನ್ನಿಯುಳ್ಳರ ದೇವನೊಡನೆ ಕೋಪವನು ಧರಿಸಿದನದೇವಣ್ಣಿಸುವೆನು||೧೭||

ಪೊಡವಿಯೊಳು ಖಳವಹ್ನಿಯುಗ್ರ ಖಳವಹ್ನಿಯಿಂ
ದಡವಿಗಿಚ್ಚತ್ಯುಗ್ರವಡವಿಗಿಚ್ಚಿಂದ ನೆಱೆ
ಸಿಡಿಲುಗ್ರ ಸಿಡಿಲಿಂದ ವಡಬಾನಳನುಗ್ರವಾ ವಡಬಾನಳಂಗಮತ್ತೆ
ಕಡೆಯ ಶಿಖಿಯುಗ್ರವಂತಾ ಕಡೆಯ ಶಿಖಿಯಿಂದ
ಮೃಡನ ಹಣೆಗಣ್ಣುಗ್ರವಾಮೃಡನ ಹಣೆಗಣ್ಣ
ಕಿಡಿಯಂ ಹರಿಶ್ಚಂದ್ರನೊಡನೆ ಕೌಶಿಕ ಮುನಿದ ಕೋಪಾಗ್ನಿಯುಗ್ರವಾಯ್ತು ||೧೮||

ತಱಿಸಂದ ಮುನಿಯ ಕೋಪದ ಕಿಚ್ಚಿನುಬ್ಬರದ
ಬಿಱುಬನಱಿದತಿತೀವ್ರತರವಾದುದಿನ್ನು ಕಿಱಿ
ದಱಲಿ ತಗ್ಗುವುದಲ್ಲ ಗರ್ವಿಸುವುದುಚಿತವಲ್ಲೆಂದು ವಸುಧಾಧೀಶನು
ಅಱಿಯದನ್ಯಾಯಮಂ ಮಾಡಿದೆನಿದೊಮ್ಮಿಂಗೆ
ನೆಱೆದ ಕೋಪಾಗ್ನಿಯಂ ಬಿಡು ತಂದೆಯೆಂದು ಧರೆ
ಗುಱುವ ಸತಿಸುತವೆರಸಿ ಪೊಡೆವಟ್ಟಡಣಕಿಸಿದನಾಸರದ ಕೋರಡಿಗನು||೧೯||

ಕೋಡದಂಜದೆ ಲೆಕ್ಕಿಸದೆ ಬಂದು ಬನದೊಳಗೆ
ಬೀಡ ಬಿಟ್ಟನಿತ್ಯವನ್ಯಾಯ ಕೋಟಿಯಂ
ಮಾಡಿ ಮಕ್ಕಳುಗಳಂ ಸಾಯೆ ಸದೆಬಡಿದುದಲ್ಲದೆ ಬನ್ನವೆತ್ತಿ ಹಲವು
ಕೇಡುವಾತುಗಳಿಂದ ಕೆಡೆನುಡಿದು ಮತ್ತೀಗ
ಬೇಡ ಕೋಪವನುಡುಗು ತಂದೆಯೆಂದಡೆ ನಿನ್ನ
ಕೋಡ ಕೊಱೆಯದೆ ಬಱಿದೆ ಬಿಟ್ಟಪೆನೆ ಮಗನೆ ಕೇಳೆಂದನಾ ಮುನಿನಾಥನು ||೨೦||

ಕ್ರೂರರತ್ಯಧಮರುದ್ರೇಕಿಗಳು ದುರ್ಜನಾ
ಕಾರಿಗಳು ಧೂರ್ತರೊಳಗಾಗಿ ಶರಣೆನಲು ನಿಜ
ವೈರಮಂ ಬಿಡುವರೆಂದಾಗಳೀ ಸರ್ವಸಂಗನಿವೃತ್ತರೆನಿಪ ನಿಮಗೆ
ಓರಂತೆ ಬೇಡಿಕೊಳ್ಳುತಿಪ್ಪೆನ್ನ ಮೇಲಿನಿತು
ಕಾರುಣ್ಯವೇಕಿಲ್ಲ ತಂದೆಯೆನಲೆನ್ನಯ ಕು
ಮಾರಿಯರ ಮದುವೆಯಾಗೆಲ್ಲಾ ನಿರೋಧಮಂ ಬಿಡುವೆನಿಂತೀಗೆಂದನು||೨೧||

ಅರಸುತನದತಿಮದದ ಮಸಕದಿಂ ಮುಂಗಾಣ
ದುರವಣಿಸಿ ಮೀಱಿ ಮಱೆದಾನಕೃತ್ಯಂಗಳಂ
ಚರಿಸುತಿರೆ ಕಂಡು ಶಿಕ್ಷಿಸುವರಲ್ಲದೆ ದಿಟಂ ಪ್ರತ್ಯಕ್ಷನೀವೆನ್ನನು
ಕರೆದು ಚಾಂಡಾಲ ಸತಿಯರ ಕೂಡಿರೆಂದಿಂತು
ಕರುಣಿಸುವರೇ ಮುನಿವರೇಣ್ಯ ಪೇಳೆಂದು ಭೂ
ವರನು ಶಿವಶಿವ ಎಂದನಾ ಮಾತುಗೇಳ್ದಾ ದೋಷವನು ಪರಿಹರಿಸಲೆಂದು ||೨೨||

ಗುರುವೆಂದು ಶಿವನೆಂದು ನಿಮ್ಮಡಿಗಳಿಂದು ನೀ
ವಿರಿಸಿದಂತಿಹೆನು ನೀವೆಂದಂತೆ ನಡೆವೆನೆಂ
ದರಸ ಕಟ್ಟುತ್ತಮಿಕೆಯಂ ನುಡಿವೆ ನುಡಿದು ಕೈಯ್ಯೊಡನೆ ಮತ್ತೆಮ್ಮಾಜ್ಞೆಯ
ಪರಿಕಿಸದೆ ಮೀಱುವುದಿದಾವ ಸುಜನತ್ವವೆನೆ
ದೊರೆಗೆಟ್ಟು ಹೊಲತಿಯರನಿರಿಸಿಕೋ ಎಂದು ನೀಂ
ಕರುಣಿಸಲುಬಹುದೆ ನಾನದನೋತು ಮಾಡಬಹುದೇ ಮುನಿಪ ಹೇಳೆಂದನು||೨೩||

ವಿವಿಧ ಗುರುವಾಜ್ಞೆಯೊಳು ಮಾಡುವವು ಕೆಲವು ಮೀ
ಱುವವು ಕೆಲ ಕಾರ್ಯಂಗಳುಳ್ಳವಂ ಮಾಳ್ಪುದುಳಿ
ದವ ಬಿಡುವುದೈಸಲೇ ಗುರುಭಕ್ತಿಯೆಂದೆನಲು ದೇವ ನೀವೆನ್ನ ಮನದ
ಹವಣನಾರಯ್ಯಲೆಂದನುಗೆಯ್ದಿರಲ್ಲದೀ
ನಣವನರಕಮಂ ಮಾಡ ಹೇಳಿದವರುಂಟೆ ನಿ
ಮ್ಮವನು ನಾ ನಿಮ್ಮ ಮನದನುವನಱಿಯೆನೆ ಮುನಿಪ ಕೇಳೆಂದನವನೀಶನು ||೨೪||

ಒತ್ತಿ ನಿನ್ನಯ ಮನದ ಹವಣಱಿಯಲೆಂದು ನುಡಿ
ಯಿತ್ತಿಲ್ಲ ತಾತ್ಪರ್ಯವಾಗಿ ನುಡಿದೆವು ನಿನ್ನ
ಚಿತ್ತದಲಿ ಶಂಕಿಸದೆ ಮದುವೆಯಾಗೆಂದು ಕೌಶಿಕಮುನೀಂದ್ರಂ ನುಡಿಯಲು
ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವ
ವೆತ್ತ ಸತಿಯರ್ಗೆಳಸಿ ಘೋರನರಕಾಳಿಗನಿ
ಮಿತ್ತ ಹೋಹವನಲ್ಲ ಬೆಸಸಬೇಡಿದನೆಂದು ಭೂಭುಜಂ ಕೈಮುಗಿದನು||೨೫||

ಎಡೆವಿಡದೆ ಬೇಡಿ ಕಾಡುವಿರಾದಡಿನ್ನು ಕೇಳ್
ಕಡೆಗೆನ್ನ ಸರ್ವರಾಜ್ಯವನಾದಡಂ ನಿಮಗೆ
ಕೊಡಹಡೆವೆನೈ ಸಲ್ಲದೀಯೊಂದು ತೇಜಮಂ ಕೊಡೆನೆಂದು ಭೂಪಾಲನು
ನುಡಿಯಲು ತಥಾಸ್ತು ಹಡೆದಂ ಹಡೆದನವನೀಶ
ರೊಡೆಯ ದಾನಿಗಳರಸ ಸತ್ಯಾವತಂಸ ಎಂ
ದೆಡೆವಿಡದೆ ಹೊಗಳಿ ಬಿಡದಾಘೋಷಿಸಿದನು ಸಂಗಡದ ಮುನಿನಿಕರ ಸಹಿತ ||೩೨||

ತಿರಿಗಿ ಮಂತ್ರಿಯ ವದನಮಂ ನೋಡುತರಸನಿರೆ
ಸರಸಿಜಾನನೆ ಚಂದ್ರಮತಿ ರಾಣಿಯರ ದೇವಿ
ಹರನೇಕಭಾವವೆನಿಸುವ ಕೌಶಿಕಂ ಬೇಡುತಿರಲು ಮಂತ್ರವ ಮಾಳ್ಪರೆ
ಹರುಷದಿಂ ಸರ್ವರಾಜ್ಯವನೀವುದರಸ ಎಂ
ದರಸಿ ನುಡಿಯಲು ಮನಂ ಶಂಕಿಸದೆ ಸಗ್ಗಳೆಯ
ಕರದಲೆತ್ತಿದನೆಱೆದ ಧಾರೆಯನು ಮುನಿವರಗೆ ಮುನವರರು ತಲೆದೂಗಲು||೪೬||

ಏನೇನನೆಱೆದೆ ಧಾರೆಯನೆನಲು ಚತುರಂಗ
ಸೇನೆಯಂ ಸಕಲಭಂಡಾರವಂ ನಿಜರಾಜ
ಧಾನಿಯಂ ಜಗದಾಣೆ ಘೋಷಣೆಯುಮಂ ಕಟಕವನು ಸಪ್ತದ್ವೀಪಂಗಳ
ಆನಂದದಿಂದಿತ್ತೆನಿನ್ನು ಸರ್ವಾನುಸಂ
ಧಾನಮಂ ಬಿಟ್ಟು ಕರುಣಿಸಿ ಹರಸುತಿಹುದೆಂದು
ಭೂನಾಥನೆಱಗಿ ಬೀಳ್ಕೊಂಡಡಣಕಿಸಿ ನಗುತ ಹೋಗಯ್ಯ ಹೋಗೆಂದನು ||೪೭||

ಎಳಸಿ ನೀನೆನಗೆ ಧಾರೆಯನೆಱೆದ ಸರ್ವಸ್ವ
ದೊಳಗಣವು ನಿನ್ನ ತೊಡಿಗೆಗಳವಂನೀಡೆನಲು
ಕಳೆದು ನೀಡಿದಡಿನ್ನು ಮಂತ್ರಿ ಸತಿ ಸುತರ ತೊಡಿಗೆಗಳ ನೀಡೀಗಳೆನಲು
ಕಳೆದು ಕೊಟ್ಟಡೆ ಮೇಲೆ ನೀವೆಲ್ಲರುಟ್ಟುಡಿಗೆ
ಗಳನು ನೀಡೆಂದಡವನೀವ ಪರಿಯಾವುದೆಂ
ದಳುಕಿ ಮನಗುಂದಿ ಚಿಂತಿಸುತ ಕೈಮುಗಿದಿರ್ಪ ಭೂಪನಂ ಕಂಡೆಂದನು ||೪೯||

ಅವನಿಪರು ಮರುಳರೆಂಬುದು ತಪ್ಪದಿದಕುಪಾ
ಯವ ಕಾಣ್ಬುದರಿದೆ ನಾ ತೋಱಿದಪೆನೆಂದು ತ
ನ್ನವನೊಬ್ಬನುಟ್ಟ ಹಣ್ಣಱುವೆ ಸೀರೆಯನೀಸಿಕೊಂಡು ನಾಲ್ಕಾಗಿ ಸೀಳಿ
ಶಿವಶಿವ ಮಹಾದೇವ ಕರುಣವಿಲ್ಲದ ಪಾಪಿ
ಯವಿಚಾರದಿಂ ನೀಡೆ ನಾಚದೊಗಡಿಸದಳುಕ
ದವರೊಬ್ಬರೊಂದೊಂದನುಟ್ಟು ದಿವ್ಯಾಂಬರವನಿತ್ತಡಲಸದೆ ಕೊಂಡನು||೫೦||

ಜತ್ತಕನ ನುಡಿಗೆ ತೆಕ್ಕಿದನೆ ತೆರಳಿದನೆ ತಲೆ
ಗುತ್ತಿದನೆ ಸಡಫಡಿಲ್ಲಿಲ್ಲವಧಿಯಂ ಕೊಟ್ಟು
ಚಿತ್ತವಿಟ್ಟನುಸರಿಸಿಕೊಂಬಿರಾದಡೆ ತಂದು ನಿರ್ಣೈಸಿ ಕೊಡುವೆನೆನಲು
ಹತ್ತು ದಿನವೆನಲು ಮುನಿಯಾಱೆನೆನಲರಸನಿ
ಪ್ಪತು ದಿನವೆನಲು ಯತಿ ದೊರಕದೆ ನೋಪತಿ ಮೂ
ವತ್ತುದಿನವೆನಲು ಋಷಿಯಾಗದೆನಲರಸ ನಾಲ್ವತ್ತೆಂಟು ದಿನವೆದನು ||೫೫||

ಶಿವಪೂಜೆಯಂ ಮಾಡದವನು ಗುರ್ವಾಜ್ಞೆಗೆ
ಟ್ಟವನು ಪರಸತಿಗಳುಪುವವನು ಪರರಸುಗೆ ಮುಳಿ
ವವನು ತಾಯಂ ಬಗೆಯದವನು ತಂದೆಯನೊಲ್ಲದವನು ಪರನಿಂದೆಗೆಯ್ವ
ಅವನು ಇಟ್ಟಿಗೆಯ ಸುಟ್ಟವನು ಬೇಗೆಯನಿಕ್ಕು
ವವನಧಮರನು ಬೆರಸುವವನು ಕುಲಧರ್ಮಗೆ
ಟ್ಟವನಿಳಿವ ನರಕದೊಳಗಿಳಿವೆನವಧಿಗೆ ನಿಮ್ಮ ಧನವನೀಯದಡೆಂದನು||೫೭||

ಬಿಟ್ಟು ಹೆದಱದೆ ಹೋಹ ನೃಪನ ಕಳೆಯಂ ಕಂಡು
ಕೆಟ್ಟೆನವನಿಯನೆಯ್ದೆಕೊಂಡಡಂತದನೊಡಂ
ಬಟ್ಟು ಶಪಥಕ್ಕೆ ಮೆಯ್ಗೊಟ್ಟನವನಲ್ಲಿ ಹುಸಿ ಹುಟ್ಟದಿನ್ನಕಟ ನಾನು
ನಟ್ಟು ಕೋಟಲೆಗೊಂಡನಂತಕಾಲಂ ತಪಂ
ಬಟ್ಟ ಪುಣ್ಯವನೀವೆನೆಂದು ಹೋದಡೊಳ
ಗಿಟ್ಟುಕೊಂಬರೆ ಮುನಿಗಳೆನ್ನನೆಂದೋರಂತೆ ಮಱುಗಿದಂ ಮುನಿನಾಥನು ||೬೧||

ಧರೆ ಬಿರಿಯಲಳ್ಳಿಱಿವನಂತನಿಸ್ಸಾಳದ
ಬ್ಬರವನಾಲಿಸಿ ಪುರದ ಕೇರಿಗಳನೊಪ್ಪೆ ಸಿಂ
ಗರಿಸಿ ಮನೆಮನೆಗಳೊಳು ಗುಡಿತೋರಣಂಗಳಂ ಸರದೆಗೆದು ಸಂಭ್ರಮದಲಿ
ಅರರೆ ಕೋಟಾಕೋಟಿ ಕರಿತುರಗಪತ್ತ
ಪರಿಜನಂವೆರಸಿ ಮತ್ತಾ ಹರಿಶ್ಚಂದ್ರಭೂ
ವರನನಿದಿರ್ಗೊಳಲು ನಡೆದರು ಶಶಿಯನಿದಿರ್ಗೊಂಡು ಹೆಚ್ಚುವಂಬೋಧಿಯಂತೆ ||೬೯||

ಹಲೊಗೆದ ಚಂದ್ರಕಳೆಯಂತೆ ಬಿಱುವೈಶಾಖ
ವಗಿದ ಬನದಂತೆ ಬಿಸಿಲೊಳುಬಿಸುಟ ತಳಿರಂತೆ
ಮೊಗ ಕಂದಿ ಕಳೆಗುಂದಿಯಱುವೆಗಪ್ಪಡವುಟ್ಟ ರಾಗವಳಿದೊಪ್ಪಗೆಟ್ಟು
ಮಗನರಸಿಮಂತ್ರಿಸಹಿತವನಿಪಂ ಹಿಂದೆ ದೇ
ಸಿಗನಂತೆ ಕೌಶಿಕನ ಕಾಹಿನೊಳು ಬರೆ ಕಂಡು
ಬಗೆ ಬೆದಱಿ ಹೊದ್ದಿ ಹೊಡೆವಟ್ಟು ಕಾಣಿಕೆಯ ಚಿತ್ತೈಸುಭೂಭುಜ ಎಂದರು ||೭೨||

ಎನಗರಸುತನ ಮಾದು ಹೋಗಿ ವಿಶ್ವಾಮಿತ್ರ
ಮುನಿಗಾದುದಾತನಂಕಂಡು ಕಾಣಿಕೆಯನಿ
ತ್ತನುದಿನಂ ಬೆಸಕೈವುದೆನಲೊಲ್ಲೆವೆನಲು ಬೋಧಿಸಿ ಬಲಾತ್ಕಾರದಿಂದ
ಜನವ ಕಾಣಿಸಿ ಕಾಣಿಕೆಯ ಕೊಡಿಸಿ ಹಿಂದಗೊಂ
ಡಿನಕುಲಲಲಾಮನೆಯ್ತಂದು ಪುರಮಂ ಪೊಕ್ಕು
ಮನದೊಳುತ್ಸವದ ಹೆಚ್ಚುಗೆಯಳಿದು ನಿಂದ ಮಂದಿಯ ನೋಡುತಂ ನಡೆದನು ||೭೩||

ನೂಕಿ ನಡೆದರಮನೆಯ ಹೊಕ್ಕು ಸಿಂಹಾಸನ
ಕ್ಕಾ ಕೌಶಿಕಂ ಬಂದು ಭೂಭುಜನ ಕೈಯ ಪಿಡಿ
ದೀ ಕಟಕವೀ ಕೋಟೆಯೀ ಕರಿಗಳೀ ತುರಗವೀ ರಥಗಳೀ ಪರಿಜನ
ಈ ಕೋಶವೀ ಕಾಂತೆಯೀ ಕುವರನೀ ಮಂತ್ರಿ
ಯೀ ಕಾಮಿನೀಜನಂ ಮಱುಗದಂತರಸಾಗ
ಬೇಕಾದಡೆನ್ನ ಮಕ್ಕಳ ಮದುವೆಯಾಗು ಕಾಡದೆ ಬಿಟ್ಟು ಹೋಹೆನೆಂದ||೭೫||

ಹೆತ್ತ ತಾಯ ಮಾಱಿ ತೊತ್ತ ಕೊಂಬರೆ ಮೂಗ
ನಿತ್ತು ಕನ್ನಡಿಯ ನೋಡುವರೆ ಮಾಣಿಕದೊಡವ
ನೊತ್ತೆಯಿಟ್ಟೊಡೆದ ಗಾಜಂ ಹಿಡಿವರೇ ಕೋಪದಿಂ ಸತ್ತು ಮದುವೆಯಹರೆ
ಕತ್ತುರಿಯ ಸುಟ್ಟರಳ ಕುಱುಕಲನುಗೆಯ್ವರೇ
ಚಿತ್ತೈಸು ಹೊಲತಿಯರನೆರೆದು ನಾನೋವದಿ
ಪ್ಪತ್ತೊಂದು ತಲೆವೆರಸಿ ನರಕಕ್ಕೆ ಹೋಹೆನೇ ಮುನಿನಾಥ ಹೇಳೆಂದನು ||೭೬||

ಒಲ್ಲದಿರಬೇಡ ಲೇಸೊಲ್ಲೆಯೇಕೊಲ್ಲೆಯೆ
ಮ್ಮಲ್ಲಿ ತಪ್ಪಿಲ್ಲಾದಡಿನ್ನು ನೀನೀಗ ನಿನ
ಗುಳ್ಳ ಪರಿವಾರಮಂ ಕರಸು ಬೇಗದಲಿಂತು ಚತುರಂಗಬಲಸೇನೆಯ
ಸಲ್ಲಲಿತ ದೇಶಕೋಶವನು ಕಟಕವನವ
ಕ್ಕುಳ್ಳ ಕುಲಕರಣ ದುರ್ಗಂ ಮುದ್ರೆ ಮೊದಲಾದು
ವೆಲ್ಲಮಂ ಬಿಡದೊಪ್ಪುಗೊಟ್ಟು ಹೋಗೇಳೆನಲು ಕರಸಿದಂ ಭೂನಾಥನು||೭೭||

ನವಮ ಸ್ಥಲಂ

ಸೂಚನೆ :-
ಮುನಿ ಕೌಶಿಕಂಗಯೋಧ್ಯೆಯನಿತ್ತು ತಾನೀವ
ಧನಕೆ ತೆಱಕಾಱನಂ ಕೊಂಡು ಬಳಿವಿಡಿದು ಪುರ
ಜನವನುಱೆ ನಿಲಿಸಿ ಕಾನನಕೆ ನಡೆದಂ ಸತ್ಯನಿಧಿ ನೃಪಹರಿಶ್ಚಂದ್ರನು ||

ಇದು ರತ್ನಭಂಡಾರವಿದು ಹೇಮಭಂಡಾರ
ವಿದು ಸುನಾಣೆಯ ವರ್ಗವಿದು ಪಟ್ಟಕರ್ಮಕುಲ
ವಿದು ಬೆಳ್ಳಿಯುಗ್ರಾಣವಿದು ಕಂಚಿನುಗ್ರಾಣವಿದು ಸರ್ವಶಸ್ತ್ರಶಾಲೆ
ಇದು ಹಸ್ತಿಸಂದೋಹವಿದು ತುರಗಸಂತಾನ
ವಿದು ವರೂಥಪ್ರಕರವಿದು ಪದಾತಿವ್ರಾತ
ವಿದ ನೋಡಿಕೋಯೆನೆತ್ತೊಪ್ಪಿಸಿದನಾ ಮುನಿಗೆ ಭೂನಾಥಕಂದರ್ಪನು ||೩||

ದಂತಿಯಿಂದಿಳಿದು ನಡೆದಱಿಯದವಬಱುಗಾಲೊ
ಳೆಂತಡಿಯನಿಡುವೆ ಹಾಸಿನೊಳು ಪವಡಿಸುವಾತ
ನೆಂತು ಕಲುನೆಲದೊಳೊಱಗುವೆ ಸಿತಚ್ಛತ್ರ ತಂಪಿನೊಳು ಬಪ್ಪಾತ ನೀನು
ಎಂತು ಬಿಱುಬಿಸಿಲನಾನುವೆ ಪುರದೊಳಿಪ್ಪಾತ
ನೆಂತರಣ್ಯದೊಳಿಪ್ಪೆ ಜನವನಗಲ್ದಱಿಯದವ
ನೆಂತು ಪೇಳೇಕಾಕಿಯಾಗಿಪ್ಪೆ ಎಂದು ಮೊಱೆಯಿಟ್ಟುದು ಸಮಸ್ತಜನವು ||೬||

ಹೊಱಗೆ ದಾನವ ಬೇಡಿದವರುಂಟೆ ಕೊಟ್ಟು ಬೇ
ಸಱದ ಮುಗುದರಸು ದೊರಕಿದನಲೇ ಎಂದು ಕ
ಟ್ಟಱೆಗಂಡ ಪಾಪಿ ನಿಷ್ಕರುಣಿ ನಿರ್ದಯ ಮೂರ್ಖ ನೀಚ ನೀರಸ ನಿರ್ಗುಣ
ನೆಱೆ ಕೊಂದೆ ನಂಬಿ ನಚ್ಚಿರ್ದರೆಮ್ಮೊಡಲೊಳ
ಳ್ಳಿಱಿವುತಿಪ್ಪಳಲ ಬೇಗೆಯ ಬೆಂಕಯುರಿ ನಿನ್ನ
ನಿಱಿಯದೇ ಹೇಳು ವಿಶ್ವಾಮೃತ್ಯುವಾದೆ ವಿಶ್ವಾಮಿತ್ರ ಎನುತಿರ್ದರು ||೭||

ಜಡೆಗಳೆದು ಮಕುಟಮಂ ನಾರಸೀರೆಯನು ತೊಱೆ
ದುಡಿಗೆಯಂ ರುದ್ರಾಕ್ಷಮಾಲೆಯಂ ಕಳೆದು ಮಣಿ
ದೊಡಿಗೆಯಂ ಕಂದಮೂಲವನು ಬಿಟ್ಟೂಟಮಂ ದರ್ಭೆಯಂ ಬಿಟ್ಟಸಿಯನು
ಅಡವಿಯಂ ಬಿಸುಟು ನಗರಿಯ ಭಸಿತಮಂ ಬಿಟ್ಟು
ಕಡು ಸುಗಂಧಗಳ ಜಿತೇಂದ್ರಿಯತ್ವವ ಬಿಟ್ಟು
ಮಡದಿಯರ ಜಗವಱಿಯೆ ಕೂಡಲು ವ್ರತಕ್ಕೆ ಮುಪ್ಪಾಯ್ತೆ ಮುಪ್ಪಿನೊಳೆಂದರು ||೮||

ಮಲೆತು ಬೆನ್ನಟ್ಟುವ ಮಹಾರಿಷಡ್ವರ್ಗಮಂ
ಗೆಲಲಱಿಯದವನಾವ ಹಗೆಗಳಂ ಗೆಲುವೆ ನಿ
ನ್ನೊಳಗೆ ಕರಣವ ಸಂತವಿಡಲಱಿಯದವನಾವ ದೇಶಮಂ ಸಂತವಿಡುವೆ
ಸಲೆ ತಪಸ್ತೇಜದಿಂ ಪುರುಷಾರ್ಥಕೋಶಮಂ
ಬಳಸಲಱಿಯದನಾವ ತೇಜದಿಂ ಕೋಶಮಂ
ಬಳಸಿದಪೆ ಕಂಗೆಟ್ಟು ಕಡುಪಾಪಿ ಮೂರ್ಖ ಕೌಶಿಕ ಕೇಳು ಕೇಳೆಂದರು ||೯||

ಪುರದ ಪುಣ್ಯಂ ಪುರುಷರೂಪಿಂದೆ ಪೋಗುತಿದೆ
ಪರಿಜನದ ಭಾಗ್ಯವಡವಿಗೆ ನಡೆಯುತಿದೆ ಸಪ್ತ
ಶರಧಿಪರಿವೃತಧರೆಯ ಸಿರಿಯ ಸೊಬಗಜ್ಞಾತವಾಸಕ್ಕೆ ಪೋಗುತಿದೆಕೋ
ಎರೆವ ದೀನಾನಾಥರನಂವಡಗುತಿದೆ
ವರಮುನೀಂದ್ರರ ಯಾಗರಕ್ಷೆ ಬಲವಳಿಯುತಿದೆ
ನಿರುತವೆಂದೊಂದಾಗಿ ಬಂದು ಸಂಧಿಸಿ ನಿಂದ ಮಂದಿ ನೆಱೆ ಮೊಱೆಯಿಟ್ಟುದು ೧೦||

ಮನದೊಳಗೆ ಮಱುಗದಿರಿ ಚಿಂತಿಸದಿರಳಲದಿರಿ
ಮುನಿಯದಿರಿ ನೋಯದಿರಿ ಧೃತಿಗೆಡದಿರೀಗಳೆರ
ಡನೆಯ ಶಿವನೆನಿಪ ಕೌಶಿಕನೊಡೆಯನಾದನಾತನ ಪಾದಪಂಕಜಕ್ಕೆ
ಎನಗೆ ಬೆಸಕೈವಂತೆ ಬೆಸಕೈವುದಂಜುವುದು
ವಿನಯಮಂ ನುಡಿವುದೋಲೈಸುತಿಹುದೆಂದು ಪರಿ
ಜನಕೆ ಕೈಮುಗಿದೆಯ್ದೆ ಬೇಡಿಕೊಂಡಂ ಧೈರ್ಯನಿಧಿ ಹರಿಶ್ಚಂದ್ರನೃಪನು ||೧೩||

ಒಸೆದೀವ ತೆಱಕಾಱನಾರಾತನಂ ನಿಯಾ
ಮಿಸು ತಂದೆ ಎನೆ ತನ್ನ ಶಿಷ್ಯಾಳಿಯೊಳು ನೋಡಿ
ಹುಸಿಯಸೂಯಾ ನೀಚವೃತ್ತಿ ನಿರ್ದಾಕ್ಷಿಣ್ಯ ನಿಷ್ಕರುಣ ನೀತಿಗಳಲಿ
ಹೆಸರುಳ್ಳ ಹಿರಿಯ ನಕ್ಷತ್ರಿಕನೆನಿಪ್ಪ ಮಾ
ನಸನನೆಕ್ಕಟಿಗರೆದು ಕೈವಿಡಿದು ಕಿವಿಯೊಡ್ಡಿ
ವಸುಧಾಧಿಪತಿಯ ಬಳಿವಿಡಿದು ಕಳುಹಲು ಬುದ್ಧಿಗಲಿಸಿದನದೇವೊಗಳ್ವೆನು||೧೫||

ಕೊಡುವೊಡೆ ಬರಲಿ ಬಾರದೆ ಕೆಡಲಿ ಕಾನನದ
ನಡುವೆ ತಗಹಿನಲಿರಿಸಿ ಕೆಲವು ದಿನವುಪವಾಸ
ಬಡಿಸಿರ್ದು ಕೆಲವು ದಿನ ದೇಹವನುವಲ್ಲವೆಂದು ನೆವವೊಡ್ಡಿ ಕೆಲವು ದಿವಸ
ನಡೆವಾಗ ದಾರಿ ತಪ್ಪಿಸಿ ತಿರುಹಿ ಕೆಲವು ದಿನ
ಪಡಿಯ ಬೀಯಕ್ಕಾಣೆಯಿಟ್ಟಿಂತು ಕೆಲವು ದಿನ
ಕೆಡಿಸಿ ನುಡಿದವಧಿಯಾಯ್ತೆಂದು ಧರೆಯಱಿಯೆ ನೃಪನಂ ಹುಸಿಕನೆನಿಸೆಂದನು||೧೬||

ಬಿಸಿಲಾಗಿ ಬಿಹಱುಗಾಳಿಯಾಗಿ ಕಲುನೆಲನಾಗಿ
ವಿಷಮಾಗ್ನಿಯಾಗಿ ನಾನಾಕ್ರೂರಮೃಗವಾಗಿ
ಮಸಗಿ ಘೋರಾರಣ್ಯವಾಗಿ ಗರ್ಜಿಸಿ ಕವಿವ ಭೂತಭೇತಾಳರಾಗಿ
ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂ
ದಿಸಿ ಹೋಗಿ ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ
ಹುಸಿಗೆ ಹೂಂಕೊಳಿಸುವೆಂ ಭೂಭುಜನನೆನ್ನಿಂದ ಬಲ್ಲಿದರಾರೆಂದನು ||೧೮||

ಏಕಾದಶ ಸ್ಥಲಂ

ಸೂಚನೆ :-

ದೇಶವೆಲ್ಲವನನೃತ ಹೊದ್ದದಂದದಿ ಕೊಟ್ಟು
ಕಾಶಿಯ ನಿವಾಸದೊಳು ಸತಿಸುತರ ಮಾಱಿ ತಾಂ
ಹೇಸದೆಯನಾಮಿಕಂಗಾಳಾಗಿ ಋಣವನುತ್ತರಿಸಿದ ಹರಿಶ್ಚಂದ್ರನು

ಬಂದುದೇ ನಕ್ಷತ್ರನಾಮಮುನಿ ಎನಲೇನು
ಬಂದುದಾಂ ಬಂದ ದಿನ ಮೊದಲಿಂದುತನಕೆನ್ನ
ಹಿಂದುಳಿದ ಬತ್ತಾಯ ಬಂದುದೆನ್ನೊಡೆಯಂಗೆ ಕೊಡುವ ಹೊಸ ರಾಶಿ ಹೊನ್ನ
ತಂದೀಗ ಕೊಡು ಕೊಡದೊಡಿಲ್ಲೆನ್ನು ಹೋಗಬೇ
ಕೆಂದಡೀ ಹೊನ್ನ ಬತ್ತಾಯಕ್ಕೆ ತೆಱುವನ
ಲ್ಲೆಂದಡೀ ಮಧ್ಯಸ್ಥ ವಿಪ್ರ ಮೆಚ್ಚಲು ಕೊಂಬೆನವನೀಶ ಕೇಳೆಂದನು ||೮||

ಪಿಡಿದ ಸಂಬಳಿಗೋಲು ಕಾರೊಡಲು ಕೆಂಗಣ್ಣು
ಕುಡಿದು ಕೊಬ್ಬಿದ ಬಸುಱು ದಡದಡಿಸಿ ತರಹರಿಸು
ವಡಿಯ ಕೆದಱಿದ ತಲೆಯನಡಸಿ ಸುತ್ತಿದ ಮುಪ್ಪುರಿಯಬಾರಿ ಕಡ್ಡಣಿಗೆಯ
ಬಿಡದೆ ಢಱ್ರನೆ ತೇಗಿ ನೆರವಿಯಂ ಬಯ್ವ ಬಿಱು
ನುಡಿಯ ಕಲಿವೀರಬಾಹುಕ ಬರುತ್ತಂ ಮಾಱು
ವೊಡೆ ಕೊಂಡು ಹೊಂಗೊಡುವೆ ನಾನೆಂದು ತನ್ನ ಹಡಪಿಗನಿಂದ ಕೇಳಿಸಿದನು ||೧೭||

ಕೊಡುವಾಯನಾರು ಬೆಲೆಯೇನು ಮಾಱಿಸಿಕೊಂಬ
ಪೊಡವೀಶನೆಂಬನಾರೋ ವೀರಬಾಹು ಕೇ  
ಳ್ದಡೆ ಕೊಂಬನೀಗಳೆಂದೆನೆ ನೃಪಂ ಬೆಱಗಾಗಿ ಸೂರ್ಯವಂಶದಲಿ ಹುಟ್ಟಿ
ಮೃಡಮೂರ್ತಿ ವಾಸಿಷ್ಠಮುನಿಯ ಕಾರುಣ್ಯಮಂ
ಪಡೆದೆನ್ನನೀ ಹೊಲೆಯನಿರಿಸಿಕೊಂಡಪೆನೆಂದು
ನುಡಿವ ಬಲುಹಂ ನೋಡು ನೋಡೆಂದು ಕಡುಮುಳಿದು ಕೋಪಿಸಿದನವನೀಶನು ||೧೮||

ನಡುಗದಂಜದೆ ಹೆದಱದೋಸರಿಸದಕಟಕಟ
ಕಡೆಯ ಹೊಲೆಯಂ ಮೇರೆದಪ್ಪಿ ಬಂದೆನ್ನ ತಂ
ನ್ನೊಡೆಯಂಗೆ ದಾಸನಾಗೀಗಳೆಂದೆಂಬುದಿದು ಕಾಲಗುಣವೋ ಎನ್ನನು
ಎಡೆಗೊಂಡ ಕರ್ಮಫಲವೋ ಕಡೆಗೆ ಮೆಣಸು ಹುಳಿ
ತಡೆ ಜೋಳದಿಂ ಕುಂದೆ ನೋಡು ನೋಡೆಂದು ಘುಡು
ಘುಡಿಸಿ ಕೋಪಾಟೋಪದಿಂ ಜಱೆದು ಝಂಕಿಸಿದನವನಿಪನನಾಮಿಕನನು ||೧೯||

ಕೇಳಿಬಂದಾರ ಜಱೆದಪೆಯೆನಲು ನಿನ್ನ ಹಡ
ಪಾಳಿಯನದೇಕೆನ್ನನಱಿದಱಿ ದನಾಮಿಕಂ
ಗಾಳಾದಪಾಯೆಂದು ನುಡಿದನಿಂತೆನಬಹುದೆ ಕೀಳುಮೇಲಂ ನೋಡದೆ
ಕೀಳಾರು ಮೇಲಾರು ಹದುಳಿಪ್ಪ ನಾನು ಚಾಂ
ಡಾಳನೋ ಹುಸಿಯ ಹೊಲೆಯಂ ಹೊಱುವ ನೀನು ಚಾಂ
ಡಾಳನೋ ಹೇಳೆಂದೊಡಾನೀಗ ಹುಸಿದುದೇನೆಂದನು ಹರಿಶ್ಚಂದ್ರನು ||೨೦||

ಹೊನ್ನುಳ್ಳ ಧನಿಕರಾರಾದೊಡಂ ಕೊಂಬವರ್
ಬನ್ನಿಯೆನ್ನಂ ಮಾಱುಗುಡುವೆನೆಂದೆನೆ ದಿಟಂ
ನನ್ನಿಯುಳ್ಳವನೆಂದು ಬಗೆದು ಬೇಡಿದೆನುತ್ತಮದ್ವಿಜರು ಕೊಂಬುದೆಂದು
ಮುನ್ನ ನೀನಾಡಿತುಂಟೇ ಹೇಳು ಭೂಪಾಲ
ನಿನ್ನ ನುಡಿ ನಿನಗೆ ಹಗೆಯಾಯ್ತೆ ಕಂಡುದನಲ್ಲ
ದೆನ್ನನೀ ಹೊಲೆಹುಸಿಯ ಹೊಱುವವಂ ಹೊಲೆಯನಲ್ಲದೆ ಬಳಿಕ್ಕಾರೆಂದನು||೨೧||

ವಿತ್ತವುಳ್ಳವರ್ಗಳೆನ್ನಂ ಕೊಂಬುದೆಂದು ನುಡಿ
ಯಿತ್ತು ದಿಟವಿನ್ನು ನಾನೊಗಡಿಸಿದೆನಾದಡನಿ
ಮಿತ್ತ ಹುಸಿ ಬಂದಪುದು ಅವಧಿಗೆಟ್ಟಡೆ ಹಿಂದೆ ಮುನಿಗೆ ನಾಂ ದಾನವಾಗಿ  
ಇತ್ತ ರಾಜ್ಯಂ ನಿರರ್ಥಂಬೋಗಿ ಮೇಲೆ ಹುಸಿ
ಹೊತ್ತಪುದದಱಿಂದ ಮುನ್ನವೆ ಅನಾಮಿಕನ
ಚಿತ್ತವಂ ಪಡೆವೆನೆಂದೋತು ಕರೆದಂ ವೀರಬಾಹುಕನನವನೀಶನು ||೨೩||

ನುಡಿದೊಡವೆಯಂ ಕೊಡುವೆನೆಂದು ನುಡಿದಂದದಿಂ
ನಡೆವೆನೆಂದೊಬ್ಬರೊಬ್ಬರಿಗೆ ನಂಬುಗೆಯಿತ್ತು
ಒಡೆಯನಾದಂ ವೀರಬಾಹುವಾಳಾದನಿನಕುಲಹರಿಶ್ಚಂದ್ರನೃಪನು
ಹೆಡಗೆಹೆಡಗೆಗಳೊಳಡಿಗಡಿಗಡಕಿ ಹಸ್ತಿಯಂ
ಪಿಡಿದು ಕವಡೆಯ ಮಿಡಿದು ನಡೆ ನೋಡಿ ನೋಡಿ ತಂ
ದೆಡೆವಿಡದೆ ಸುರಿದನರ್ಥವನು ಕೌಶಿಕಮುನಿಯ ತೆಱಕಾಱ ತಲೆದೂಗಲು ||೨೬||

ಎಲವೊ ನೀ ದಿಟರಾಯನಾದಡಳುಕದೆ ಬಂದು
ನೆಲದಲ್ಲಿ ಕುಳ್ಳಿರ್ಪೆ ಸತ್ಕುಲಜನಾದಡಂ
ಹೊಲೆಯನಾದೆನ್ನ ಕಾಲಂ ಹೊಱುವೆ ಮುನಿಮತೋಚಿತ ಶಿವಾರ್ಚಕನಾದಡೆ
ಹೊಲಸಿನಟ್ಟುಳಿಗೆ ಕೊಕ್ಕರಿಸದಿಹೆ ರಾಜ್ಯಸಿರಿ
ತೊಲಗಿದಡೆ ಪೂರ್ವಗುಣವಳಿವುದೇ ಮುನ್ನ ಭವಿ
ನಿಳಯದೊಳುತಲೆಮಟ್ಟು ದುಡಿದ ಗಾವದಿಯೈಸೆ ಭೂಪಾಲನಲ್ಲೆಂದನು ||೩೩||

ಹಸುವನಳಿ ಹಾರುವನನಿಱಿ ಮಾತೆಪಿತರ ನಾ
ರ್ದಿಸು ಸುತನ ತಿವಿ ಸತಿಯ ಕೊಲು ಮಾರಿಗೊಱೆಗಟ್ಟು
ವಿಷವಕುಡಿ ಹಾವ ಹಿಡಿ ಹುಲಿಗೆ ಮಲೆ ದಳ್ಳುರಿಯೊಳಡಗು ಹೋಗೆಂದೊಡೆಯನು
ಬೆಸಸಿದಡೆ ನಾನಾಱೆನೆನಬಾರದೆಂಬಾಗ
ಳಸವಸದೊಳಿವಕಲಸಿ ಸೆಡೆದೆನಾದಡೆ ಕೊಟ್ಟ
ಬೆಸನ ನಡಸುವೆನೆಂಬ ನುಡಿ ಸಡಿಲವಾಗದೇ ಹೇಳೆಂದನವನೀಶನು ||೩೪||

ಏನನಾಂ ಬೆಸನಿತ್ತೊಡದ ಬಿಡದೆ ನಡಸುವಾ
ನೀನೆನಲು ನಡಸದಿರ್ದಡೆ ನೀನು ಕೊಟ್ಟೊಡವೆ
ದಾನವೇ ಬಗೆಯೆ ಕರಿ ಹೂಳುವನಿತರ್ಥಮಂ ಕೊಂಡು ಮಾಡದೆ ಮಾಣ್ದಡೆ
ಈ ನೆಲನಂ ಭಹೊಱುವುದೇ ನಾ ಕೊಟ್ಟ ನಂಬುಗೆಗೆ
ಹಾನಿಯಾಗದೆ ಹೋಹುದೇಯೆನಲು ಸುಡುಗಾಡ
ನಾನಂದದಿಂ ಕಾದುಕೊಂಡಿರುತಿರೆಂದು ಬೆಸಸಿದನು ಮನದನುವಱಿಯಲು ||೩೫||

ಎರಡನೆಯ ರುದ್ರನೆನಿಸುವ ವಸಿಷ್ಠನ ಶಿಷ್ಯ
ನರಿದೆನಿಪ ರುದ್ರಾರ್ಚಕಂ ಗಿರಿಜೆ ಗಣಕುಲಂ
ಬೆರಸು ರುದ್ರನನೆಳೆದು ತಂದು ಕೊಡಲಾರ್ಪ ಸತ್ಯಾಶ್ರಯಂ ತಾ ಕಾಶಿಯ
ಅರಸನಹ ರುದ್ರ ದರ್ಶನತುಷ್ಟನೆಂದೆನಿಪ
ಧರಣಿಪಂ ತಾನಿನ್ನು ರುದ್ರಭೂಮಿಯೊಳಲ್ಲ
ದಿರಲಾರ್ಪೆನೇ ಎಂದು ಧರೆಗೆ ಪೇಳ್ವಂದದಿಂ ರುದ್ರಭೂಮಿಗೆ ಬಂದನು||೩೯||

ದ್ವಾದಶ ಸ್ಥಲಂ

ಸೂಚನೆ :-
ಜನಪತಿ ಹರಿಶ್ಚಂದ್ರರಾಯನ ಕುಮಾರನಿಂ
ಧನಕೆ ಹೋದಲ್ಲಿ ಕಾಳೋರಗಂ ಪಿಡಿಯಲಾ
ಜನನಿ ಶೋಕಿಸಿದ ಮನದಳಲು ವಿಶ್ವಾಮಿತ್ರಮುನಿಯನೆಯ್ದದೆ ಮಾಣದು ||

ಒಡೆಯನತಿಕೋಪಿ ಹೆಂಡತಿ ಮಹಾಮೂರ್ಖೆ ಮಗ
ಕಡುಧೂರ್ತ ಸೊಸೆಯಾದಡಧಿಕನಿಷ್ಠುರೆ ಮನೆಯ
ನಡೆವವರು ದುರ್ಜನರು ನೆರಮನೆಯವರು ಮಿಥ್ಯವಾದಿಗಳು ಪಶುಗಳಗಡು
ಅಡಿಗಡಿಗೆ ಕೋಪಿಸುವ ಸಾಯೆ ಸದೆಬಡಿವ ಕಾ
ಳ್ಗೆಡೆವ ಕರಕರಿಪ ಸೆಣಸುವ ತಪ್ಪ ಸಾಧಿಸುವ
ಕೆಡೆಯೊದೆವ ಮಾರಿಗಾಱಗೆ ಸತ್ತು ಹುಟ್ಟುತಿಹರವನಿಪನ ಸತಿಪುತ್ರರು ||೩||

ಹೊದೆಗಡಿದು ಹತ್ತಿ ಹುತ್ತವ ಸುತ್ತಿದೆಳಹುಲ್ಲ
ಹೊದಱ ಹಿಡಿದಡಸಿ ಬಿಡದರಿದು ಸೆಳೆಯಲ್ ಕಯ್ಯ
ಹದರನೊಡೆಗಚ್ಚಿ ಜಡಿಯುತ್ತ ಭೋಂಕನೆ ಬಂದ ರೌದ್ರಸರ್ಪನನು ಕಂಡು
ಹೆದಱಿ ಹೌವ್ವನೆ ಹಾಱಿ ಹಾ ಎಂದು ಕೈಕಾಲ
ಕೆದಱಿ ಕೊರಳಡಿಯಾಗಿ ಕೆಡೆದನಕಟಕಟಮದ
ಮುದಿತ ರಾಹುಗ್ರಸ್ತವಾದ ತರುಣೇಂದುಬಿಂಬಂ ನೆಲಕೆ ಬೀಳ್ವಂದದೆ ||೯||

ಹುತ್ತಿನಿಂ ಫಣಿವೆರಸಿ ಕೆಡೆಯೆ ಕಂಡೊಡನಿರ್ದ
ತತ್ತುಕಂಗಳು ಹೆದಱಿ ಬಿಟ್ಟೋಡಿ ಹೋದರೂ
ರತ್ತಲಿತ್ತಂ ತಾಯ್ಗೆ ಹಲುಬಿ ತಂದೆಯ ಕರೆದು ದೆಸೆದೆಸೆಗೆ ಬಾಯ ಬಿಟ್ಟು
ನೆತ್ತಿಗೇಱಿದ ವಿಷದ ಕೈಯಿಂದ ಮಡಿದನೀ
ಹೊತ್ತೆನ್ನ ಕುಲದ ಕುಡಿ ಮುರುಟಿತೆಂದುಮ್ಮಳಂ
ಬೆತ್ತು ಬೀಳದೆ ಮಾಣೆನೆಂಬಂತೆ ರವಿ ಬಿದ್ದನಂದು ಪಡುವಣ ಕಡಲೊಳು||೧೦||

ತನಯನೆಂದುಂ ಬಪ್ಪ ಹೊತ್ತಿಂಗೆ ಬಾರದಿರೆ
ಮನನೊಂದಿದೇಕೆ ತಳುವಿದನೆನ್ನ ಕಂದನೆಂ
ದೆನುತ ಸುಯ್ಯುತ್ತ ಮಱುಗುತ್ತ ಬಸುಱಂ ಹೊಸೆದು ಕೊನೆವೆರಳ ಮುರಿದುಕೊಳುತ
ತನುವ ಮಱೆದಡಿಗಡಿಗೆ ಹೊಱಗನಾಲಿಸಿ ಮತ್ತೆ
ಮನೆಯೊಡತಿಗಂಜಿ ಕೆಲಸವನು ಮಾಡುತ್ತಿಪ್ಪ
ವನಿತೆಗಾದಾಪತ್ತನಾಲಿಸದೆ ಕೆಟ್ಟು ದಟ್ಟಿಸುವರದನೇನನೆಂಬೆನು ||೧೧||

ಅಡವಿಯೊಳು ಹೊಲಬುಗೆಟ್ಟನೊ ಗಿಡುವಿನೊಳಗೆ ಹುಲಿ
ಹಿಡಿದುದೋ ಕಳ್ಳರೊಯ್ದರೊ ಭೂತಸಂಕುಲಂ
ಹೊಡೆದುವೋ ನೀರೊಳದ್ದನೊ ಮರದ ಕೊಂಬೇರಱಿ ಬಿದ್ದನೋ ಫಣಿ ತಿಂದುದೊ
ಕಡುಹಸಿದು ನಡೆಗೆಟ್ಟು ನಿಂದನೋ ಎಂದಿಂತು
ಮಡದಿ ಹಲವಂ ಹಲುಬುತಂಗಣದೊಳಿರೆ ಹೊತ್ತಿ
ಹೊಡಕರಿಸಿದಳು ಕರ್ಬೊಗೆಯಂತೆ ಕವಿವ ಕತ್ತಲೆಯೊಳಗೆ ನಿಂದಿರ್ದಳು||೧೫||

ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು
ನಿಂದರಂ ಲೋಹಿತಾಶ್ವಾ ಎಂದು ಗಾಳಿ ಗಿಱಿ
ಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗಱುವಿನಂತೆ
ಮಂದಮತಿಯಾಗಿರ್ದ ಚಂದ್ರಮತಿಗೊಬ್ಬ ನೈ
ತಂದಿಂದು ಕೂಡೆ ಹೋಗಿರ್ದು ಕಂಡೆಂ ನಿನ್ನ
ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು ಹೇಳಿದನಾಗಳು ||೧೭||

ಏಕೆ ಕಚ್ಚಿತ್ತಾವ ಕಡೆಯಾವ ಹೊಲನಕ್ಕ
ಟಾ ಕುಮಾರಂ ಮಡಿದ ಠಾವೆನಿತು ದೂರವೆನ
ಲೀ ಕಡೆಯೊಳೀ ಹೊಲದೊಳೀ ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ
ನೂಕಿ ಫಣಿಯಗಿಯೆ ಕೆಡೆದಂ ದೂರವಲ್ಲಲ್ಲ
ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕ
ನೇಕ ಭಲ್ಲುಕ ಜಂಬುಕಂ ಘೂಕವೃಕಗಳೆಳೆಯದೆ ಬಿಡವು ಕೇಳೆಂದನು||೧೮||

ನುಡಿಯಲರಿದೆನಿಸಿ ಮೇರೆಯ ಮೀಱುವಳಲನಳ
ವಡಿಸಿ ಬಂದೊಡೆಯನಡಿಗಳ ಮೇಲೆ ಕೆಡೆದು ಬಾ
ಯ್ವಿಡುತರಣ್ಯದೊಳೆನ್ನ ಮಗನುಗ್ರಕಾಳೋರಗಂ ಕಚ್ಚಿ ಮಡಿದನೆಂದು
ನುಡಿಯೆ ಲೇಸಾಯ್ತು ಮಡಿದಡೆ ಮಡಿದನೆಂದು ಕೆಡೆ
ನುಡಿಯೆ ಬಂಟರನು ಕೊಟ್ಟಱಸಿಸೈ ತಂದೆ ಎನೆ
ನಡುವಿರುಳು ಬಂಟರುಂಟೇ ನಿದ್ದೆಗೆಯ್ಯಬೇಕೇಳು ಕಾಡದಿರೆಂದನು ||೧೯||

ನರಿಗಳೆಳೆಯದ ಮುನ್ನ ದಹಿಸಬೇಡವೆ ತಂದೆ  
ಕರುಣಿಸೆನೆ ದುರ್ಮರಣವಟ್ಟ ಶೂದ್ರನನು ಸಂ
ಸ್ಕರಿಸುವವರಾವಲ್ಲವೆಂದೆನಲ್ಕಾನಾದಡಂ ಹೋಗಿ ಕಂಡು ಮಗನ
ಉರಿಗಿತ್ತು ಬಪೂಪೆನೇ ಎನೆ ಕೆಲಸಮಂ ಬಿಟ್ಟು
ಹರಿಯದಿರ್ದುದನೆಯ್ದೆಗೆಯ್ದು ಹೋಗೆನಲು ಚ
ಚ್ಚರದಿ ಮಾಡುವ ಕಜ್ಜವೆಲ್ಲವಂ ಮಾಡಿ ಹೊಱವಂಟಳೊಯ್ಯನೆ ಮನೆಯನು||೨೦||

ಅತಿ ಲಜ್ಜೆಗೆಟ್ಟನ್ಯರಾಳಾಗಿ ದುಡಿದು ಧಾ
ವತಿಗೊಂಡು ಧನವನಾರ್ಜಿಸಿ ಹರಿಶ್ಚಂದ್ರಭೂ
ಪತಿ ನಮ್ಮ ಬಿಡಿಸುವಾರ್ತದ ಮೋಹದಿಂ ಹಸಿವು ನಿದ್ದೆಯಂ ತೊಱೆದು ಬಂದು
ಸುತನ ಕರೆಯೆಂದಡೇನೆಂಬೆನಾವುದ ತೋಱಿ
ಪತಿಯ ಮಱುಕವನು ಮಱೆಯಿಸುವೆನುಗ್ರಾಹಿಗಾ
ಹುತಿಯಾದನೆಂದು ಪೇಳ್ವೆನೆ ಎನ್ನ ಕಂದ ಎಂದಿಂದುಮುಖಿ ಬಾಯ್ವಿಟ್ಟಳು ||೨೯||

ಅರಮನೆ ಮಣಿಗೃಹದ ಸೆಜ್ಜೆಯೊಳು ರಿಪುನೃಪರ
ಕರಿದಂತದಿಂ ಕಡೆದ ಕಾಲ ಮಂಚದೊಳಿಟ್ಟ
ವರಹಂಸತೂಲತಲ್ಪದೊಳು ಮಣಿವೆಳಗಿನೊಳು ಸಾಗಿಸುವ ಜೋಗೈಸುವ
ತರುಣಿಯರ ನಡುವೆ ಪವಡಿಸುವೀ ಸುಕುಮಾರನೀ
ನರವರಿಸದೀ ಕಾಡೊಳಿರುತ ಕತ್ತಲೆಯೊಳಾ
ಸುರದ ಕಲುನೆಲದೊಳೊಬ್ಬನೆ ಪವಡಿಸುವುದುಚಿತವೇ ಎಂದು ಬಾಯ್ವಿಟ್ಟಳು ||೩೦||

ಗಳಗಳನೆ ಮುನ್ನ ಬೆಂದುಳಿದಿರ್ದ ಕರಿಗೊಳ್ಳಿ
ಗಳನೆಲ್ಲವಂ ಸಿದುಗಿ ತಂದೊಟ್ಟಿ ಮೇಲೆ ಮಂ
ಗಳಮಯ ಕುಮಾರನಂ ಪಟ್ಟಿರಿಸಿ ಕೆಲದೊಳುರಿವಗ್ನಿಯಂ ಪಿಡಿದು ನಿಂದು
ಬೆಳೆದಲ್ಲಿ ಬೆಳೆ ಹುಟ್ಟಿದಲ್ಲಿ ಹುಟ್ಟೆಂದು ನುಡಿ
ದಿಳುಹಲನುಗೆಯ್ದಿಳುಹಲಾದಱದಳವಳಿದು ಬಾ
ಯಳಿದು ಮೊಱೆಯಿಟ್ಟೊಡಾ ದನಿಗೇಳ್ದು ನಿದ್ರೆತಿಳಿದೆದ್ದನಾ ಭೂಪಾಲನು ||೩೫||

ನಟ್ಟಿರುಳು ಸುಡುಗಾಡೊಳೊಬ್ಬಳೋರಂತೆ ಬಾ
ಯ್ವಿಟ್ಟು ಹಲುಬುವ ವೀರನಾರಿಯಾವಳೊ ಮೀಱಿ
ಸುಟ್ಟೆಯಾದಡೆ ನಿನಗೆ ವೀರಬಾಹುಕನಾಣೆ ಕದ್ದು ಸುಡಬಂದೆ ನಿನ್ನ
ನಿಟ್ಟೆಲುವ ಮುಱಿವೆನೆಂದುರವಣಿಸಿ ಜಱೆಯುತ್ತ
ದಟ್ಟಿಸುತ ಬಂದು ಹಿಡಿದಿರ್ದ ಕಿಚ್ಚಂ ಕೆದಱಿ
ಮುಟ್ಟಿಗೆಯ ಮೇಲಿರ್ದ ಸುತನ ಹಿಂಗಾಲ್ವಿಡಿದು ಸೆಳೆದು ಬಿಸುಟಂ ಭೂಪನು||೩೬||

ಬಿಸುಡದಿರು ಬಿಸುಡದಿರು ಬೇಡಬೇಡಕಟಕಪ
ಹಸುಳೆ ನೊಂದಹನೆಂದ ಬೀಳ್ವವನನೆತ್ತಿ ತ
ಕ್ಕಿಸಿಕೊಂಡು ಕುಲವ ನೋಡದೆ ಬೇಡಿಕೊಂಬೆನಿವನೆನ್ನ ಮಗನಲ್ಲ ನಿನ್ನ
ಶಿಶುವಿನೋಪಾದಿ ಸುಡಲನುಮತವನಿತ್ತು ಕರು
ಣಿಸು ಕರುಣಿಯೆಂದೊಡೆಲೆ ಮರುಳೆ ಹೆಣವನುಟ್ಟುದಂ
ಮಸಣವಾಡಗೆಯಹಾಗವನು ಕೊಟ್ಟಲ್ಲದೇನೆಂದಡಂ ಬಿಡೆನೆಂದನು ||೩೭||

ಕೊಡಲೇನುವಿಲ್ಲವಿಂದೆನಗೆ ಲೋಗರ ಮನೆಯ
ಬಡದಾಸಿ ಕರುಣಿಸೆನೆ ನಿನ್ನ ಕೊರಳಿನೊಳಿರ್ದ
ಕಡು ಚೆಲುವ ತಾಳಿಯನದನ್ನಡವನಿರಿಸಿ ನೀ ಬಿಡಿಸಿಕೋ ಬಳಿಕವೆನಲು
ಮಡದಿ ಕರನೊಂದಕಪ ಪೊಡವಿಪತಿ ಮಡಿದ ಕೇ
ಡಡಸಿತಲ್ಲದೊಡೆನ್ನ ಗುಪ್ತಮಂಗಳಸೂತ್ರ
ದೆಡೆಯ ಹೊಳೆಹೊಳೆವೈದೆದಾಳಿಯನಿದಂ ಶ್ವಪಚನೆಂತು ಕಂಡಪನೆಂದಳು ||೩೮||


ಪುದಿದಿರುಳು ಕಡೆಗಾಣ್ಬ ಕುಱುಹಾಗುತಿದೆ ಸೂರ್ಯ
ನುದಯಿಸಿದನಾದಡೆಡೆನ್ನವರೆನ್ನನಱಸಿ ತಳು
ವಿದಳೆಂದು ಕೊಲ್ಲದಿರರೀ ಕುಮಾರನನೀಗ ದಹಿಸಬೇಕರಸ ಎಂದು
ಸುದತಿ ನುಡಿಯಲು ನುಡಿದನವನೀಶ ತೆಱೆಯನಿ
ಕ್ಕದೆ ಸುಡಲ್ಬಾರದುಳ್ಳಡೆ ಕೊಡಿಲ್ಲದಡೆ ಬೇ
ಗದಿ ಹೋಗಿ ನಿನ್ನೊಡೆಯನಂ ಬೇಡಿ ತಾ ತಾರದಿರೆ ಸುಡಲ್ಬೇಡೆಂದನು ||೫೫||

ತ್ರಯೋದಶ ಸ್ಥಲಂ

ಸೂಚನೆ :-

ಪತಿಯಾಜ್ಞೆಗಂಜಿ ನಿಜಸುತನ ಸುಡಲಮ್ಮದಾ
ಸತಿ ಹೋಗುತಿರಲು ರಕ್ಕಸಿಯೆಂದು ಪಿಡಿದು ಭೂ
ಪತಿಯ ಕೈಯಲಿ ಕೊಡಲು ಹೊಡೆದ ದೃಢಕಾ ವಿಶ್ವಪತಿ ನಿಜವ ತೋಱಿಸಿದನು ||

ಬಲಿದ ಪದ್ಮಾಸನಂ ಮುಗಿದಕ್ಷಿ ಮುಚ್ಚಿದಂ
ಜಲಿವೆರಸಿ ಗುರುವಸಿಷ್ಠಂಗೆಱಗಿ ಶಿವನ ನಿ
ರ್ಮಲರೂಪ ನೆನೆದು ಮೇಲಂ ತಿರುಗಿ ನೋಡಿ ಭೂಚಂದ್ರಾರ್ಕತಾರಾಂಬರಂ
ಕಲಿ ಹರಿಶ್ಚಂದ್ರರಾಯಂ ಸತ್ಯವೆರಸಿ ಬಾ
ಳಲಿ ಮಗಂ ಮುಕ್ತನಾಗಲಿ ಮಂತ್ರಿ ನೆನೆದುದಾ
ಗಲಿ ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ ಹರಕೆ ಹೊಡೆಯೆಂದಳು ||೧೪||

ಹರಕೆಯಂ ಕೇಳಿ ಹವ್ವನೆ ಹಾಱಿ ಬೆಱಗಾಗಿ
ಮರವಟ್ಟು ನಿಂದು ಭಾಪುರೆ ವಿಧಿಯ ಮುಳಿಸೆ ಹೋ
ದಿರುಳೆನ್ನ ಸುತನ ದುರ್ಮರಣಮಂ ತೋಱಿ ಕಯ್ಯೊಡನೆ ಮತ್ತೀಗಳೆನ್ನ
ವರಸತಿಯ ತಲೆಯನಾನೆನ್ನ ಕಯ್ಯಾರೆ ಪಿಡಿ
ದರಿವಂತೆ ಮಾಡಿದೆಯಿದಕ್ಕೆ ನಾನಿನಿತು ಹೇ
ವರಿಸುವವನಲ್ಲಪತಿಯಾಜ್ಞೆಯುಳಿದಡೆ ಸಾಕೆನುತ್ತ ಕೊಲಲನುವಾದನು ||೧೫||

ಮನದ ಶಂಕೆಯನುಳಿದು ಹೊಡೆಯಲನುವಾದ ಭೂ
ಪನ ಭಾವಮಂ ಕಂಡು ಹೊಡೆಯಬೇಡೆನ್ನ ನಂ
ದನೆಯರಂ ಮದುವೆಯಾದಡೆ ಸತ್ತಮಗನನೆತ್ತುವೆನಿವಳ ತಲೆಗಾವೆನು
ವಿನಯದಿಂ ಕೊಂಡ ಧನಮಂ ಕೊಟ್ಟು ನಿನ್ನ ಬಂ
ಧನಮೋಕ್ಷಮಂ ಮಾಡಿ ರಾಜ್ಯಮಂ ಪೊಗಿಸಿ ಮು
ನ್ನಿನ ಪರಿಯಲಿರಿಸುವೆಂ ಕೇಳೆಂದನಂಬರದೊಳಿರ್ದು ವಿಶ್ವಾಮಿತ್ರನು||೧೬||

ತಿರುಗಿ ಮೇಲಂ ನೋಡಿ ಕಂಡಿದೇಂ ಮುನಿ ನಿಮ್ಮ
ಹಿರಿಯತನಕೀ ಮಾತು ಯೋಗ್ಯವೇ ಕೇಳೆನ್ನ
ಸಿರಿ ಪೋದಡೇಂ ರಾಜ್ಯಂ ಪೋದಡೇನು ನಾನಾರ ಸಾರಿರ್ದಡೇನು
ವರಪುತ್ರನಸುವಳಿದು ಪೋದಡೇಂ ನಾನೆನ್ನ
ತರುಣಿಯಂ ಕೊಂದಡೇಂ ಕುಂದೆ ಸತ್ಯವನು ಬಿ
ಟ್ಟಿರನೆನಿಸಿದಡೆ ಸಾಕು ಎಂದೆತ್ತಿ ಹಿಡಿದ ಖಡ್ಗವ ಜಡಿಯುತಿಂತೆಂದನು ||೧೭||

ಎನ್ನ ದುಷ್ಕರ್ಮವಶದಿಂದಾದ ಕರ್ಮವೆಂ
ದಿನ್ನೆಗಂ ಬಗೆದೆತಾನಿಂದುತನಕಂ ಕಡೆಗೆ
ನಿನ್ನ ಗೊಡ್ಡಾಟವೇ ಹೊಲೆಯನಾದವನಿನ್ನು ಸತಿಗಿತಿಯ ಕೊಲೆಗೆ ಹೇಸಿ
ಬೆನ್ನೀವೆನೇ ಇದಂ ತೋಱಿ ಸಿಕ್ಕಿಸಿಬಂದ
ಗನ್ನಗತಕಕ್ಕೆ ಸೆಡೆವೆನೆ ಸಡಿಫಡೆನುತಾರ್ದು
ನನ್ನಿಕಾಱಂ ವಧುವನೆಲೆಲೆ ಶಿವಶಿವ ಮಹಾದೇವ ಹೊಡೆದಂ ಹೊಡೆದನು ||೧೮||

ಹೊಡೆದ ಖಡುಗದ ಬಾಯ ಕಡೆಯ ಹೊಡೆಗುಳನಾಂತು
ಮಡದಿಯೆಡೆಗೊರಳ ನಡುವಡಸಿ ಮೂಡಿದನು ಕೆಂ
ಜೆಡೆಯ ಶಶಿಕಳೆಯ ಸುರನದಿಯ ಬಿಸಿಗಣ್ಣ ಫಣಿಕುಂಡಲದ ಪಂಚಮುಖದ
ಎಡದ ಗಿರಿಜೆಯ ತಳಿದ ದಶಭುಜದ ಪುಲಿದೊಗಲಿ
ನುಡುಗೆಯ ಮಹಾವಿಷ್ಣುನಯನವೇಱಿಸಿದ ಮೆ
ಲ್ಲಡಿಯ ಕಾಶೀರಮಣ ವಿಶ್ವನಾಥಂ ಸುರರ ನೆರವಿ ಜಯಜಯ ಎನುತಿರೆ ||೧೯||

ಚತುರ್ದಶ ಸ್ಥಲಂ :-

ಸೂಚನೆ :- ಸುರಕುಲ ಹೊಗಳೆ ಮುನಿಕುಲವೆಯ್ದೆ ಕೊಂಡಾಡೆ
ಗುರುಕುಲಂ ಹರಸೆ ರವಿಕುಲವೆಯ್ದೆ ಹಾರಯಿಸೆ
ವರ ಹರಿಶ್ಚಂದ್ರಭೂಭುಜನಯೋಧ್ಯೆಯ ಪೊಕ್ಕು ಧರೆಯ ಪಾಲಿಸುತಿರ್ದನು||

ಕುಡಿದೌಷಧಂ ಬಾಯ್ಗೆ ನಿಗ್ರಹಂ ಮಾಡಿ ತಾ
ಳ್ದೊಡಲಿಂಗೆ ಸುಖವನೀವಂತೆ ಲೋಕದ ಕಣ್ಗೆ
ಕಡುಮುಳಿದರಂತೆ ತೋಱಿಸಿ ಸತ್ಯಶುದ್ಧವಪ್ಪನ್ನೆಗಂ ಕಾಡಿ ನೋಡಿ
ಕಡೆಯೊಳು ಹರಿಶ್ಚಂದ್ರರಾಯಂಗೆ ಗಣವೆರಸಿ
ಮೃಡನನೆಳತಂದಿತ್ತು ಕೀರ್ತಿಯಂ ಮೂಜಗದ
ಕಡೆಗೆ ಹರಹಿದ ಮುನಿವರೇಣ್ಯ ವಿಶ್ವಾಮಿತ್ರ ಬಂದನು ವಸಿಷ್ಠಸಹಿತ ||೩||

ಏಳು ಭೂರಮಣ ಎಂದಭವ ಪರಸುತ್ತ ಕ
ಣ್ಣಾಲಿಜಲಮಂ ತೊಡೆದು ಸಂತೈಸಿ ಭಸಿತಮಂ
ಭಾಳದೊಳಗಿಟ್ಟು ತೆಗೆದಪ್ಪಿ ಕೌಶಿಕನ ಕರೆದೆಲೆ ಮುನಿಪ ಸುಕುಮಾರನ
ತೋಳ ಹಿಡಿದೆತ್ತಿ ತಾ ಬೇಗೆಂದೆನಲ್ಕೆ ಮುನಿ
ಪಾಳಕಂ ವಿಷವೇಱಿ ಸತ್ತರಸುಪುತ್ರನಂ
ಏಳೇಳು ಲೋಹಿತಾಶ್ವಾಂಕ ಎನೆ ಬೆಬ್ಬಳಿಸುತೆದ್ದನೇವಣ್ಣಿಸುವೆನು ||೮||

ರಾಹುವಿನ ವದನದಿಂ ಪೊಱಮಟ್ಟ ಶಶಿಬಿಂಬ
ವಾಹಾ ಎನಲು ತೊಳಗಿ ಬೆಳಗುತ್ತೊಪ್ಪುವ ತೆಱದಿ
ಗಾಹಿ ಕೌಶಿಕನ ಕೃತ್ರಿಮಸರ್ಪದಷ್ಟದಿಂ ನಿದ್ರೆತಿಳಿದೇಳುವಂತೆ
ಲೋಹಿತಾಶ್ವಂ ವಿರೂಪಾಕ್ಷ ಶರಣೆನುತೇಳೆ
ದೇಹದೊಳು ಪುಳಕದಿಂ ಗುಡಿಗಟ್ಟಿ ಮಾತೆಯ ಮ
ಹಾಹರುಷದಿಂದಪ್ಪಿ ಬಂದೆಱಗಿದನು ವಿಶ್ವಪತಿಯಂಘ್ರಿ ಕಮಲಯುಗಕೆ ||೯||

ಅತಿಹುಸಿವ ಯತಿ ಹೊಲೆಯ ಹುಸಿಯದಿಹ ಹೊಲೆಯನು
ನ್ನತಯತಿವರನು ಹುಸಿದು ಮಾಡುವ ಮಹಾಯಜ್ಞ
ಶತವೆಯ್ದೆ ಪಂಚಪಾತಕ ಸತ್ಯವೆರಸಿದ ನ್ಯಾಯವದು ಲಿಂಗಾರ್ಚನೆ
ಶ್ರುತಿಮತವಿದೆನ್ನಾಜ್ಞೆ ನಿನ್ನಂತೆ ಸತ್ಯರೀ
ಕ್ಷಿತಿಯೊಳಿನ್ನಾರುಂಟು ಹೇಳೆಂದು ಪಾರ್ವತೀ
ಪತಿ ಹರಿಶ್ಚಂದ್ರನಂ ತಲೆದಡವಿ ಬೋಳೈಸಿ ಕೌಶಿಕಂಗಿಂತೆಂದನು ||೧೦||

ನುಡಿಯೊಳನೃತಂ ತೋಱದಂತೆ ನಿನ್ನಲೆಗೆ ನಿಂ
ದಡೆ ಮೆಚ್ಚಿ ಮೇಲೇನ ಕೊಡುವೆನೆಂದೆಂದೆಯದ
ಕೊಡು ಬೇಗದಿಂ ವಿಶ್ವಾಮಿತ್ರ ಎಂದಡಾನೈವತ್ತುಕೋಟಿ ವರುಷ
ಬಿಡದೆ ಮಾಡಿದ ತಪಃಫಲದೊಳರ್ಧವನಾಂತೆ
ಕಡುಮುಳಿದು ಕಾಡಿನೋಡಿದೆನು ಮೆಚ್ಚಿದೆನಿನ್ನು
ಹಿಡಿಯೆಂದುಸಿರ್ದು ಫಲವೆಲ್ಲವಂ ಕೊಟ್ಟನರಸಂಗೆ ಮುನಿಗಳ ದೇವನು ||೧೧||

ಧರೆಯೊಳು ಹರಿಶ್ಚಂದ್ರಚಾರಿತ್ರಮಂ ಕೇಳ್ದ
ನರರೇಳು ಜನ್ಮದಿಂ ಮಾಡಿರ್ದ ಪಾತಕವು
ತರಣಿಯುದಯದ ಮುಂದೆ ನಿಂದ ತಿಮಿರದ ತೆಱದೆ ಹರೆಯುತಿಹುದೇಕೆಂದೊಡೆ
ಹರನೆಂಬುದೇ ಸತ್ಯ ಸತ್ಯವೆಂಬುದು ಹರನು
ಎರಡಿಲ್ಲವೆಂದು ಶ್ರುತಿ ಸಾಱುತಿರಲಾ ವಾಕ್ಯ
ವರರೆ ನಿರುತವ ಮಾಡಿ ಮೂಜಗಕೆ ತೋಱಿದ ಹರಿಶ್ಚಂದ್ರಕಥೆಗೇಳ್ದಡೆ ||೩೨||

ಅನೃತವಱಿಯದ ಹೊಲೆಯನಂ ನೆನೆಯೆ ಪುಣ್ಯವೆಂ
ದೆನೆ ಸೂರ್ಯಕುಲಜ ಕಲಿ ದಾನಿ ಸತ್ಯಂ ವಸಿ
ಷ್ಠನ ಶಿಷ್ಯನಧಿಕಶೈವಂ ಕಾಶಿಯೊಳ್ ಮೆಱೆದ ವೇದಪ್ರಮಾಣಪುರುಷ
ಘನನೃಪ ಹರಿಶ್ಚಂದ್ರನೆಂದಡಾತನ ಪೊಗಳ್ದು
ಜನ ಬದುಕಬೇಕೆಂದು ಕಾವ್ಯ ಮುಖದಿಂ ಪೇಳ್ದ
ನನಪೇಕ್ಷೆಯಿಂದ ಕವಿ ರಾಘವಾಂಕಂ ಮಹಾಲಿಂಗಭಕ್ತರ ಭಕ್ತನು ||೩೩||

ಕೃತಜ್ಞತೆಯಿಂದ ನೆನೆಯುತ್ತಿದ್ದೇನೆ,

ಸಂಪಾದಕರು
ಎನ್. ಬಸವಾರಾಧ್ಯ, ಎಂ. ಎ.
ಪಂಡಿತ ಎಸ್. ಬಸಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ