ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಮಂಗಳವಾರ, ಡಿಸೆಂಬರ್ 26, 2017

ಕಬ್ಬಿಗರ ಕಾವ - ಆಂಡಯ್ಯ

ಕಾವನಗೆಲ್ಲ
{ ಮದನವಿಜಯ}
{ಕಬ್ಬಿಗರ ಕಾವ}

ಆವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದುರ್ಕಿನಿಂ
ದಾವನ ಪೂವಿನಂಬದಟರಂ ತಲೆವಾಗಿಸುತಿರ್ಪುದೇೞ್ಗೆಯಿಂ
ದಾವನ ಪಜ್ಜಳಿಪ್ಪ ಜಸಮೆಣ್ದೆಸೆಯೊಳ್ ನೆಲೆಸಿರ್ಪುದಾತನೀ
ಗಾವಗಮೆನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲ ಬಲ್ಲಹಂ ||೧||

ಸಿರಿಯೆಱೆಯಂ ಮಾದೇವಂ
ಸರಸತಿಯೆಱೆಯರ್ಕಳಡಿಗಳೆಂಬೀ ಕೆಂದಾ
ವರೆಗಳ್ ಪೊರೆಗೆಮ್ಮಂ ಪೊಸ
ಸಿರಿಗಂಪಿಂ ಪರಮೆವಱಿಯನೆಂತಂತೊಲವಿಂ ||೨||

ಎನ್ನೀ ಕಬ್ಬದೊಳೆಂದುಂ
ಸನ್ನಿದಮಾಗಿರ್ಕೆ ಕಣ್ಣಮಯ್ಯನ ಕಡುಜಾಣ್
ರನ್ನನ ಮೆಯ್ಸಿರಿ ಗಜಗನ
ಬಿನ್ನಣಮಗ್ಗಳನ ಕಾಣ್ಕೆ ಜನ್ನಿಗನ ಜಸಂ ||೪||

ಎಱಗುವನರುಹಂಗುೞಿದ
ರ್ಗೆಱಗಂಕನಸಿನೊಳಮೋದನಲ್ಲದೆ ಮೆಚ್ಚಂ
ಮಱೆದುಂ ಪೆಱವೆಣ್ಣೊಳ ನೆರೆ
ದಱಿಯಂ ಲೆಕ್ಕಿಗರ ಪಿರಿಯನೆನಿಪಾಂಡಯ್ಯಂ ||೯||

ಅವರೊಳ್ ನೋೞ್ಪೊಡೆಮೊದಲಿಗ
ನಿವನೆನೆ ಗರುವಿಕೆಯನಾಂತ ಸಾಂತಂಗಂ ಚೆ
ಲ್ವುವರಿವ ಬಲ್ಲವ್ವೆಗಮೊ
ಪ್ಪುವ ಲೆಕ್ಕಿಗರರಸನೊಗೆದನೆಸೆವಾಂಡಯ್ಯಂ ||೧೧||

ಎಳಗಿಳಿವಿಂಡಿನಂತೆ ಮಿಳಿರ್ದಾಡುವ ತುಂಬಿಯ ಬಂಬಲಂತೆ ಕೆಂ
ದಳಿರ್ಗಳ ತೊಂಗಲಂತೆ ನಡೆ ನೋಡುವ ಪೆಂಡಿರ ನೋಟದಂತೆ ಪೂ
ಗಳ ಪೊಸಗಂಪಿನೊಳ್ ಪೊರೆದು ತೀಡುವ ತೆಂಬೆಲರಂತೆ ತೋರ್ಪ ತಿಂ
ಗಳ ಸಿರಿಯಂತೆ ಸೋಲಿಸದೆ ಕಾವನ ಕಬ್ಬಮದಾರನಾದೊಡಂ ||೧೪||

ಸೊಗಯಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ
ಬಗೆಗೊಳೆ ಪೇಱಲಾಱರಿನಿಂತುಂ ಸಲೆ ಮುನ್ನಿನ ಪೆಂಪನಾಳ್ದ ಕ
ಬ್ಬಿಗಗದು ಮಾತನಾಡಿದವೊಲಂದಮನಾಳ್ದಿರೆ ಬಲ್ಪು ನೆ
ಟ್ಟಿಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ ||೧೫||

ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ ಬಣ್ಣಿಸಲ್ಕಾರನಾ
ನೆಲನಂ ಮತ್ತಿನ ಮಾನಿಸರ್ ಪೊಗೞಲೇನಂ ಬಲ್ಲರೆಂಬೊಂದು ಬ
ಲ್ಲುಲಿಯಂ ನೆಟ್ಟನೆ ತಾಳ್ದು ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು ಮೆ
ಲ್ಲೆಲರಿಂ ಪೂತ ಕೊಳಂಗಳಿಂ ಕೆಱೆಗಳಿಂ ಕಾಲೂರ್ಗಳಿಂ ಕೆಯ್ಗಳಿಂ ||೧೮||

ನಲವಿಂದಿರುಳುಂ ಪಗಲುಂ
ನೆಲನೆಲ್ಲಂ ಬಾೞ್ವುದೀತನಾದ ಬೞಿಕ್ಕೆಂ
ದುಲಿಯೆ ಸಲವುತ್ತುಮಿರ್ಪಂ
ತೊಲಗದೆ ನನೆಯಂಬನಂತಾ ಪೊೞಲಂ ||೩೮||

ವಚನ|| ಅಂತು ನೋೞ್ಪರ ಕಣ್ಗೆ ನೆಲೆವೀಡಾದ ನನೆವಿಲ್ಲಬಲ್ಲಹನ ಮೇಲಾದ ಸೊಂಪಿಂಗೆ
ಬೆಕ್ಕಸಂಬಡುತ್ತುಂ ಬಂದಿಂಗದಿರ್ಗಳಂ ಕಾಣ್ಕೆಗೊಟ್ಟು ಜೊನ್ನವಕ್ಕಿ ಬಿನ್ನವಿಸಿತ್ತದೆಂತೆನೆ

ನಿನಗೆಂದುಂ ತಲೆವಾಗದ
ನಿನಗಳ್ಕದ ನಿನ್ನ ವೇಳೆಗಾಯದ ಪಿರಿದುಂ
ನಿನಗೆ ಬೆಸಕೆಯ್ದು ಬಾೞದ
ನಿನಗೋಡದ ಪಗೆವರೆಂಬರಿಲ್ಲಿಂದುವರಂ ||೧೧೪||

ವಚನ|| ಈಗಳ್ ಶಿವನೆಂಬ ದುಟ್ಟಗೊರವಂ ಮಂಜುವೆಟ್ಟಮಂ ಗೊಟ್ಟಂಮಾಡಿ ಕಿತ್ತಡಿಗಳಂ
ಮರುಳ್ವಡೆಗಳಂ ಕೂಡಿಕೊಂಡು ನಿಮ್ಮಡಿಗಳುಮಂ ಮಱೆದು ಲೆಕ್ಕಿಸದೆ ಮೇಲೆ ಬಿೞ್ದ ಪಾವುಂ
ನೇವಾಳಮಾಗೆ ಮಯ್ಯಱಿಯದಿರ್ಪನಂತುಮಲ್ಲದೆಯುಂ

ತಳಿರೆಂದೊಡಸುಗೆಯೆಂದೊಡೆ
ಗಿಳಿಯೆಂದೊಡೆ ಕರೆವ ಕೋಗಿಲೆಗಳೆಂದೊಡೆ ಬಂ
ದೆಳಮಾವೆಂದೊಡೆ ನೆಱೆದಿಂ
ಗಳ ತಣ್ಬೆಳಗೆಂದೊಡುದ್ದಮುರಿವಂ ಗೊರವಂ ||೧೧೫||

ಪುದಿದುರಿಗಣ್ಣನಾಣೆಯನದೇವೊಗೞ್ವೆಂ ಮುಗುಳೆಂದು ಮುಟ್ಟ ಬಾ
ರದು ಬನಮೆಂದು ಬಾಯ್ದೆಱೆಯಬಾರದು ಸಂಪಗೆಯೆಂದು ಸೂಡಬಾ
ರದು ಕೊಳನೆಂದು ಕೆಯ್ದುಡುಕಬಾರದು ತಾವರೆಯೆಂದು ತೋಱಬಾ
ರದು ಪೊಸ ಸುಗ್ಗಿಯೆಂದುಸಿರಬಾರದು ತನ್ನಯ ಮಂಜುವೆಟ್ಟಿನೊಳ್ ||೧೧೬||

ವಚನ|| ಅದರ್ಕೆ ತಕ್ಕುದಂ ನಿಮ್ಮಡಿಗಳೆ ಬಲ್ಲಿರೆಂದು ಬಗೆಯೞಲಾಱೆ ಜೊನ್ನವಕ್ಕಿ
ಬಿನ್ನಪಂಗೆಯ್ಯಲೊಡನೆ

ನೆಗೆದುರಿವ ತಲೆಯ ಕಿಚ್ಚಿನೊ
ಳುಗುವಿಂಗೆ ನೆಯ್ವೊಯ್ವ ತೆಱದೆ ಪೊಣ್ಮಿದ ಮುಳಿಸಿಂ
ಭುಗಿಲನುರಿದೆೞ್ದನಾ ದಿ
ಟ್ಟಿಗಳೊರ್ಮೆಯೆ ತೋರ ಕಿಡಿಗಳಂ ಕೆದಱುವಿನಂ ||೧೧೮||

ವಚನ ||ಅಂತು ದೆಸೆದೆಸೆಗೆ ಮಸಗಿ

ಜವನಂ ತುತ್ತುವೆನೊಂಬತುಂ ಗರಮನೆಣ್ಬುಂ ಗೊಂಟಿನೊಳ್ ಕಟ್ಟಿ ತೂ
ಗುವೆನೇೞುಂ ಕಡಲಂ ಕಡಂಗಿ ಕುಡಿವೆಂ ತಳ್ತಾಱಿಲಂ ಪೊಯ್ದುಂ ತೂ
ಱುವೆನೈದುಂ ಮೊಗಮುಳ್ಳನಂ ಕೆಡುಪುವೆಂ ನಾಲ್ಕುದೞಂ ನೂಂಕೆನು
ಗುಣವೆನಾಂ ಮೂಱಡಿಯಿಟ್ಟ ನಚ್ಚಿಯರಡಂತೊಂದಾಗಿ ನೋೞ್ಪನ್ನೆಗಂ ||೧೨೦||

ಎನಗಂ ಮಾರಿಗಮಿದಿರಾಂ
ಪನದಾವಂ ನಡೆದು ಪೋಗಿ ಬೇಗದೆ ಮುಕ್ಕ
ಣ್ಣನನಿಕ್ಕಿ ಮಟ್ಟಿ ಬಿಡೆ ತೊ
ಟ್ಟನೆ ಜಡೆಯಂ ಕಿೞ್ತು ಬೞಿಯ ಪೆಱೆಯಂ ತರ್ಪೆಂ ||೧೨೦||

ಸೊಗಯಿಪ ಪೊನ್ನನೇವುರದ ಮೆಲ್ಲುಲಿ ಮಾಣದೆ ಮೂಱುಕಣ್ಣನಂ
ಪೊಗೞ್ವವೊಲುಣ್ಮಿ ಪೊಣ್ಮಿ ಪಿರಿದುಂ ಸುೞಿವಾ ನುಡಿವೆಣ್ಣನಾಂತನ ನಾ
ಲ್ಮೊಗಮಿರದಚ್ಚದಾವರೆಯ ಚೆಂದಮನೊಂದಳಕೆಯ್ಯೆ ಬಂದು ನೆ
ಟ್ಟಗೆ ಬಲವಕ್ಕದೊಳ್ ನೆಲಸಿ ಕಣ್ಗೆಸೆದಂ ಬಿದಿ ನಿಂದು ನೋೞ್ಪರಾ ||೧೨೮||

ಧರೆಯಂ ಪೊತ್ತಾನೆಯ ಕೆ
ಯ್ಗೊರೆಯೆನೆ ಕಡುವೆಟ್ಟಿತಾದ ನಾಲ್ಕುಂತೋಳುಂ
ಕರಮೆಸೆದಿರೆ ಕುಳ್ಳಿರ್ದಂ
ಸಿರಿಯರಸಂ ಕಾರ ಮುಗಿಲ ರೂವೆಂಬಿನೆಗಂ ||೧೨೯||

ಹರಿಸದೆ ಸಗ್ಗದ ಜತಿಗಳ್
ನೆರೆದಂತೆರಡುಂ ಕೆಲಂಗಳೊಳ್ ತರದಿಂ ಕು
ಳ್ಳಿರೆ ಕುಳ್ಳಿರ್ದಂ ನಡೆ ನೋ
ೞ್ಪರ ಕಣ್ಗಳ ಹಬ್ಬಮೆಂಬಿನಂ ಕಱೆಗೊರಲಂ ||೧೩೧||

ಕಡುಪಿಂದಾತನೊಳಾಂತರೋಡಿ ಬನಮಂ ಪೊಕ್ಕುಂ ಪೊಡರ್ಪಾಱೆ ಕಾ
ಲ್ವಿಡಿದು ಪಚ್ಚೆಲೆವಾರ್ದು ಮೆಯ್ಗರೆದು ಕೊಂಬಂ ಪೊರ್ದಿಯುಂ ನಲ್ಮೆಯಂ
ನುಡಿದುಂ ಮೆಯ್ಸಿರಿಗೆಟ್ಟುಮಿಂತು ನೆಲದೊಳ್ ನಾಣ್ಗುಂದಿ ನಿಂದಿರ್ಪರು
ಗ್ಗಡದಿಂ ಬಂದಿದಿರೊಡ್ಡಿ ಬಾೞ್ವವರನೆಂದುಂ ಕಂಡುದಿಲ್ಲಿನ್ನೆಗಂ ||೧೩೪||

ಉರ್ಕಾಳ್ಗಳಾದೊಡೇಂ ಕೇಳ್
ಸೊರ್ಕಾನೆಯ ಕೆಯ್ಯ ಕರ್ವನಿನಿತುಂ ಸೆಳೆಯಲ್
ಬರ್ಕುಮೆ ಪೆಱೆಯಂ ಬಿಡೆನಂ
ತಿರ್ಕದು ಮತ್ತೊಂದು ಕಜ್ಜಮುಳ್ಳೊಡೆ ನುಡಿಯಾ ||೧೪೧||

ಪಿರಿದುಂ ಮಾತಿನೊಳೇನೈ
ಸರಲಂಗೆ ಪೊಡರ್ಪಿನೇೞ್ಗೆಯುಂಟಾದೊಡೆ ಚೆ
ಚ್ಚರದಿಂದೆತ್ತಿಸಿ ತಂದಿ
ರ್ವರ ಬಲ್ಪಂ ಬೞಿಕೆ ನೋಡು ನೀಂ ಕಾಳೆಗದೊಳ್ ||೧೪೫||

ಎನ್ನೊಡೆಯನ ಬಲ್ಪಂ ನೀ
ವಿನ್ನುಂ ಕಂಡಱಿದುದಿಲ್ಲ ಬಿದಿಯೆಂಬಣ್ಣಂ
ಬನ್ನಂಬಟ್ಟುದನಱಿಯನೆ
ಮುನ್ನಂ ಮೆಯ್ಗಣ್ಣನಱಿಯನೇ ಪೊಡೆಯಲರಂ ||೧೪೬||

ಕಡಲೊಳ್ ಮೆಯ್ಗರೆದಿರ್ದೊಡಂ ಪೊಡವಿಯೊಳ್ ಪೊಕ್ಕಿರ್ದೊಡಂ ಬೆಟ್ಟದೊಳ್
ನಡೆದೇಱಿರ್ದೊಡಮಳ್ಕುತುಂ ದೆಸೆಗಳೊಳ್ ಬೆಳ್ಕುತ್ತಡಂಗಿರ್ದೊಡಂ
ಕಡುಪಿಂದೊರ್ಮೆಯೆ ಪೂವಿನಂಬದಟರಂ ಮೆಯ್ದಾಗಿ ನೋಯಿಪ್ಪುದೆಂ
ದೊಡೆ ಕೇಳೆನ್ನಯ ಬಾರಿಯೊಳ್ ತಿಸುಳಿ ತಾನಿನ್ನೆತ್ತ ಪೋಗಿರ್ದಪಂ ||೧೫೦||

ಪೂಗಣೆಯನೆತ್ತಿ ಬಂದುದ
ನಾಗಳೆ ಸಿವನಱಿದು ನೊಸಲ ಕಣ್ವಾಯ್ದವನಂ
ಬೇಗದೆ ನಡೆದವನೊಳ್ ನೀಂ
ತಾಗೆನೆ ನಸುನಗುತುಮಾತನಂದಿಂತೆಂದಂ ||೧೮೫||

ನೆಲನಂ ಪೋಗದೆಯೆಂಬುದೇನುಗಿದು ಬೆಟ್ಟಂ ಹಿಟ್ಟು ಮಾಡೆಂಬುದೇ
ನುಲಿದೆಂಟುಂದೆಸೆಯಾನೆಯಂ ಪಿಡಿದು ಕೋಡಂ ಕಿೞ್ತು ತಾರೆಂಬುದೇ
ನೆಲೆ ಪೆರ್ಮಾರಿಯನಾವಗಂ ಪೊಸೆದು ನೀಂ ಮುಕ್ಕೆಂಬುದೇನಕ್ಕಟೀ
ಯಲರ್ವಿಲ್ಲಾತನ ಪಾಡಿಯಂ ಕಡುಪಿನಿಂ ತಾಗೆಂಬುದೇಂ ಬೀರಮೇ ||೧೮೬||

ತರದಿಂ ಮೇಲೊಗೆದಿರ್ಪ ಪೀಲಿದೞಿಗಳ್ ತಳ್ತಾಗಸಂ ರೂಪುಗೆ
ಟ್ಟಿರೆ ಕೂರ್ವಾಳ ತೊಳಪ್ಪ ನುಣ್ಬೊಗರದೆತ್ತಂ ಪರ್ವಿ ಕಾರ್ಮಿಂಚಿನಂ
ತಿರೆ ಬಲ್ಲಾಳ್ಗಳ ಬಲ್ಸರಂ ದೆಸೆಗಳಂ ತಳ್ಪೊಯ್ಯೆ ಮಾಱಾಂತ ಬೀ
ರರ ಸೊರ್ಕೊರ್ಮೆ ದಲೋಡೆ ಬಂದುದಳವಿಂ ಪಾಡಿಂತು ಮುಕ್ಕಣ್ಣನಾ ||೧೯೪||

ತಡಮೀಱಿ ಬಂದು ತೆಂಕಣ
ಬಡಗಣ ಕಡಲೊಂದನೊಂದು ತಾಗುವ ತೆಱದಿಂ
ಬಿಡೆ ಗಜಱಿ ಮಿಕ್ಕು ತಕ್ಕಿಂ
ಪಡೆಯೆರಡುಂ ದೆಸೆಗೆ ಮಸಗಿ ತಾಗಿದುವೆತ್ತಂ ||೨೦೫||

ಕಡು ನೆಗೆದಬ್ಬರಂ ಮೊೞಗಿನಂತಿರೆ ಬಿಲ್ಲೊಳಮರ್ಕೆವೆತ್ತ ಕ
ನ್ನಡಿಗಳ ಬಳ್ಳಿವೆಳ್ಪು ಕಡುಮಿಂಚಿನವೋಲಿರೆ ಗಾಲಿವಟ್ಟೆಯೊಳ್
ನಡೆವನ ಕಾಯ್ಪು ತಣ್ಣಗಿರೆ ಕಾರ್ಮುಗಿಲೊಡ್ಡುಗಳಿಂತಿವೆಂಬಿನಂ
ಗಡಣಿಸಿ ಬಂದು ಕೋಲ ಮೞೆಯಂ ಕಱೆದರ್ ಮಿಗೆ ಬಿಲ್ಲ ಬಲ್ಲಹರ್ ||೨೦೬||

ತೇರೊಳಗಿರ್ದು ನಾಡೆಱೆಯರಚ್ಚರಲಂಬಿನ ಸೋನೆ ಸುತ್ತಲುಂ
ಭೋರೆನುತೊರ್ಮೆ ಸೈಗಱೆಯೆ ತೊಟ್ಟನೆ ಪರ್ವಿದ ಮರ್ವಿನಿಂದಮಾ
ತಾರಗೆವಟ್ಟೆಯಂ ದೆಸೆಗಳಂ ನೆಲನಂ ಕಡಲಂ ಬನಂಗಳಂ
ಕಾರಿರುಳೈದೆ ನುಂಗಿದವೊಲಾದುದು ಕಾಳೆಗಮೇನಳುಂಬಮೋ||೨೧೪||

ಕಟ್ಟಿದಿರೊಳಾಂತರಂ ನೆಱೆ
ನಿಟ್ಟಿಸಿ ನನೆವಿಲ್ಲ ಬಲ್ಲಹಂ ಮಾಱಣಿಯಂ
ನೆಟ್ಟನೆ ತೋಳ್ವಲದಿಂದೆ
ೞ್ಬಟ್ಟಿದನವನಿದಿರೊಳಾವನುಂ ನಿಂದಪನೇ||೨೨೪||

ನನೆವಿಲ್ಲಾತನ ಮುಕ್ಕ
ಣ್ಣನ ತಕ್ಕಂ ನೋಡವೇೞ್ಕುಮೆಂದೊಲವಿಂದಂ
ತನತನಗೆ ಬಂದು ಮುಗಿಲೊ
ಡ್ಡಿನ ಕೆಲದೊಳ್ ಸಗ್ಗದವರೆಲ್ಲರ್ಗಳ್ ನಿಂದರ್ ||೨೨೫||

ಕೋವಣಮುಂ ಗುಂಡಿಗೆಯುಂ
ನೇವರಿಸಿದ ಬೂದಿಯುಂ ಜಲಕ್ಕನೆ ಚೆಲ್ವಿಂ
ತೀವಿರೆ ಬಿಸುಗಣ್ಗೊರವಂ
ಕಾವನ ತೋಳ್ವಲಮನಱಿವೆನೆಂದೇೞ್ತಂದಂ ||೨೨೬||

ತೊಳಗುವ ಸಂಕುಂ ಪಾಱುಂ
ಬಳೆ ನೇರ್ಪಡೆ ಪರ್ದನೇೞಿ ಬಂದೊಲವಿಂ ಪ
ಜ್ಜಳಿಪ ಮುಗಿಲೆಡೆಯೊಳಿರ್ದಂ
ತಳತಳಿಸುವ ತೊಡವನಾಂತು ಸಿರಿವೆಣ್ಣರಸಂ ||೨೨೮||

ಕರಮೊಪ್ಪುವೆಣ್ಟು ತೋಳುಂ
ಬಿರಿವೂವಂ ನಗುವ ನಾಲ್ಕು ಮೊಗಮುಂ ಚೆಲ್ವಿಂ
ಪೊರೆಯೇಱಿರೆ ಬಂದಿರ್ದಂ
ಸರಸತಿವರನಂಚೆಯೇಱಿ ನಲವಿಂ ಬೊಮ್ಮಂ ||೨೨೯||

ಕೆಟ್ಟೋಡಿ ಪಾಡಿಯೆಲ್ಲಂ
ಪಿಟ್ಟುಂ ಪಿಟ್ಟಾಗಿ ಪೋದೊಡಂ ಬಗೆಯದೆ ಕ
ಣ್ಗಿಟ್ಟಳವೆನಿಸಿದ ಬೆಳ್ಳಿಯ
ಬೆಟ್ಟನೆ ಪೆಱದೆಗಯದೀಸನೋರ್ವನೆ ನಿಂದಂ ||೨೩೦||

ವಚನ|| ಅದಂ ಕಂಡು ಕಂಗನೆ ಕನಲ್ದು ಮುಟ್ಟೆವಂದು ಮೂದಲಿಸಿ ನನೆವಿಲ್ಲಬಲ್ಲಹನಿಂತೆಂದಂ

ಕಡುಪಿಂ ಪೂವಿನ ಕೋಲ್ಗಳ್
ಗಡಣಿಸಿ ಕವಿತಂದು ನಾಂಟುವಾಗಳ್ ನಿನ್ನೀ
ಜಡೆಯುಂ ತೊವಲುಂ ಪಾವಿನ
ತೊಡವುಂ ಲಾಗುಳಮುಮಡ್ಡಮೇಂ ಬಂದಪುವೇ||೨೩೧||

ನಿನ್ನಗ್ಗದ ಪಡೆಯೆಲ್ಲಮ
ದೆನ್ನಯ ಪೂಗಣೆಯ ಕೊಲೆಗೆ ಗುಱಿಯಾದುದು ಕೇಳ್
ಇನ್ನಾದೊಡಮೆಳವೆಱೆಯಂ
ಕೆನ್ನಂ ಪಿಡಿದಿರದೆ ಬಿಟ್ಟು ಬಾೞ್ ಬಡಗೊರವಾ ||೨೩೨||

ಇವು ಮುನ್ನೃರಾರ ಬಲ್ಪಂ ನೆಲೆಗಿಡಿಸವಾರಾರ ತಕ್ಕಂ ನೆಲಕ್ಕಿ
ಕ್ಕವಿವಾರಾರುರ್ಕನೊತ್ತಂಬರಿದು ಕಿಡಿಸವಾರಾರ ಕಾಯ್ಪೆಲ್ಲವಂ ನೂಂ
ಕವಿವಾರಾರೇೞ್ಗೆಯಂ ಕುಂದಿಸಿ ಕಳೆಯವಿವಾರಾರ ಕಲ್ಮೆಯ್ಗಳೊಳ್ ನಾಂ
ಟವೆನುತ್ತಂತೆಲ್ಲರುಂ ಬಾಯ್ವಿಡೆ ಗಡಣದೆ ಪೂಗೋಲ್ಗಳೈತಂದುವಾಗಳ್ ||೨೩೭||

ಗಡಣದೆ ಮಾದೇವಿಯ ಬಗೆ
ಯೊಡೆಯನ ನೊಸಲೊಳ್ ಕದಂಪಿನೊಳ್ ಕೈ ಮೊಗದೊಳ್
ತೊಡೆಯೆಡೆಯೊಳ್ ತೋಳೆಡೆಯೊಳ್
ಬಿಡೆ ನಟ್ಟುವು ಕಾವನಂಬುಗಳ್ ತಾವೈದುಂ ||೨೪೧||

ಕಟ್ಟಾಳ್ಗಳೆನಿಪ ರಕ್ಕಸ
ರೊಟ್ಟಜೆಗೆಟ್ಟೞಲೆ ಸಗ್ಗಿಗರ್ ನೆಲನನೊಡಂ
ಬಟ್ಟಿರೆ ಕಾಳೆಗದೆಡೆಯೊಳ್
ತೊಟ್ಟನೆ ಮಾದವಿಯರಸನರೆವೆಣ್ಣಾದಂ ||೨೪೨||

ಮೊರೆದಾಡುವ ಮಱಿದುಂಬಿಯ
ನೆರವಿಗಳೈತಂದು ಮುಸುಱಿ ಪೊಸಗಂಪನುಣು
ತ್ತಿರೆ ಕಾವನ ಮೇಲಂದ
ಚ್ಚರಸಿಯರಿಚ್ಚೆಯೊಳೆ ಮುಗುಳ ಮೞೆಯಂ ಕಱೆದರ್ ||೨೪೩||

ವಚನ|| ಅದಂ ಕಂಡು ಕಡುಮುಳಿಸೆಂಬ ಕಿಚ್ಚಿನ ಕರ್ಬೊಗೆಯಂತಗುರ್ಬುವಡೆದು ನೊಸಲೊಳ್
ಗಂಟಿಕ್ಕಿದ ಪುರ್ಬುಗಳುಂ ಆ ಕಿಚ್ಚಿನ ನಾಲಗೆಯಂತೆ ಕೆಂಪಡರ್ದ ಕಣ್ಗಳುಂ ಪೊಱಮಡುವ
ಸಾಪದಕ್ಕರದ ಪೊಯ್ಲಿಂಗೆ ನಡುಗುವಂತೆ ಕೆತ್ತುವ ತುಟಿಯುಂ ಪರ್ಬುವ ಕನಲ್ಕೆಯೆಂಬ ಬಳ್ಳಿ
ಕೂರ ದಂಟಾದಂತೆ ಪಿಡಿದ ಲಾಗುಳಮುಂ ಅಂಜಿಕೆಯಂ ಪುಟ್ಟಿಸೆ

ಎಱಗುವ ತುಂಬಿವಿಂಡಗಿಯೆ ಬಗ್ಗಿಪ ಕೋಗಿಲೆ ಕೊಂಬುಗೊಂಡು ಬ
ಳ್ಕುಱೆ ಮುಳಿದಡ್ಡವಾಯ್ದ ಗಿಳಿ ಮಲ್ಲೞಿಗೊಂಡೊಳಸಾರೆ ಮಾವು ಕೈ
ಮಱೆಯೆ ತೆರಳ್ದು ರೂವುಗಿಡೆ ತೆಂಬೆಲರಂಚೆಗಳೊಡ್ಡು ಪಾಱೆ ಬಾಂ
ದೊಱೆದಲೆಯಂ ಕನಲ್ದು ನಡೆತಂದು ಬಸಂತನ ಸೊರ್ಕು ಸೋರ್ವಿನಂ ||೨೪೪||

ವಚನ|| ಮುಂದೆ ನಿಂದು ಪಿರಿಯರೆಂಬುದು ಬಗೆಯದುರ್ಕಿಂದೆನ್ನೊಳ್ ಕಾದಿದೆ ಅಂತದಱಿಂ
ನಿನ್ನೋಪಳಂ ಕೂಡದೆ ಪೆಱರಱಿಯದಂತೆಲ್ಲಿಯಾದೊಡಂ ನೀಂ ಕಾವನೆಂಬುದಂ ಮಱೆದಿರ್ ಎಂದು
ಬೇಗದೆ ಪೂಗಣೆಯಂಗೆ ಸಾಪಮನಿತ್ತುದಂ ಬಸಂತನಿಂ ನೆಲೆವೀಡಿನೊಳಿರ್ದಿಚ್ಚೆಗಾರ್ತಿ ಕೇಳ್ದು
ಮುಚ್ಚೆವೋಗಿ ಬೞಿಯಮೆಂತಾನುಮೆೞ್ಚತ್ತಿರಲೊಡನೆ

ಪದಪಿಂ ಪೊರ್ದಿದರಿಚ್ಚೆಯೀವ ಪದಿನೆಂಟುಂ ದೋಸಮುಂ ಪೊರ್ದದಾ
ಡಿದ ಮಾತೆಲ್ಲರ ಬಾೞೆಯಪ್ಪಱಿವಿನೊಳ್ ಮೂಲೋಕಮಂ ಕಾಣ್ಬ ಪು
ಟ್ಟಿದವೊಲ್ ಕಣ್ಗಮರ್ದೊಪ್ಪಿ ತೋಱುವರುಹಂತಂ ನಲ್ಮೆಯಿಂ ಮಾೞ್ಕೆ ಬೇ
ಡಿದುದಂ ತನ್ನಱವಟ್ಟೆಗರ್ಗೆ ನೆಲನುಂ ಮುನ್ನೀರುಮಿರ್ಪನ್ನೆಗಂ ||೨೭೨||

ನೆನಕೆ
ಆರ್.ವಿ.ಕುಲಕರ್ಣಿ
ಪ್ರಕಟಣೆ,
ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು-೫೬೦೦೧೮