ಭಾನುವಾರ, ಜುಲೈ 16, 2017

ವಿದುರ ನೀತಿ

ವಿದುರ  ನೀತಿ

ಬಂದನಾ ಧೃತರಾಷ್ಟ್ರರಾಯನ
ಮಂದಿರಕೆ ಕಂಡನು ಮಹೀಷನ
ನೊಂದೆರಡು ಮಾತಿನಲಿ ಸೂಚಿಸಿ ಮರಳಿದನು ಮನೆಗೆ
ಅಂದಿನಿರುಳೊಳು ನಿದ್ರೆ ಬಾರದೆ
ನೊಂದು ವಿದುರನ ಕರೆದು ರಾಯನ
ತಂದೆ ಬಿಸುಸುಯ್ಯುತ್ತ ನುಡಿದನು ವಿದುರದೇವಂಗೆ ||೧||

ನಾಳೆ ಸಭೆಯಲಿ ಬಂದ ಹದನನು
ಹೇಳುವನು ಸಂಜಯನು ಸಂಧಿಯೊ
ಕಾಳಗವೊ ಮುಂದರೀಯಬಾರದು ದುಗುಡವಾಯ್ತೆನಗೆ
ಹೇಳು ನಿರುತವನಿಂದಿರುಳನು
ಬೀಳುಕೊಟ್ಟುದು ನಿದ್ರೆಯೆನೆಭೂ
ಪಾಲಕನ ಸಂತೈಸಿ ಮತ್ತಿಂತೆಂದನಾ ವಿದುರ ||೨||

ಬಲವಿಹೀನನು ಬಲ್ಲಿದನ ಕೂ
ಡೊಲಿದು ತೊಡಕಿದವಂಗೆ ಕಾಮದ
ಕಳವಳದಲಿರ್ದವಂಗೆ ಧನದಳಲಿಂದ ಮರಗುವಗೆ
ಕಳವಿನಲಿ ಕುದಿವಂಗೆ ದೈವದ
ನೆಲೆಯನರಿಯದವಂಗೆ ದಿಟವಿದು
ತಿಳಿಯೆ ಬಾರದು ನಿದ್ರೆಯೆಂದನುಭೂಪತಿಗೆ ವಿದುರ||೩||

ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದದಿರದೈದರಲಿ ವರ್ಜಿಪುದಾರನೇಳರಲಿ
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿವೊಂಬತ್ತರಲಿ ಮನ
ಗುಂದಿಸದಿರೀರೈದರಲಿ ಭೂಪಾಲ ಕೇಳೆಂದ ||೪||

ತನ್ನ ಚಿಂತೆಯದೊಂದು ದೈವದ
ಗನ್ನಗತಕವದೆರಡು ಭಾವದ
ಬನ್ನಣೆಯ ಬಗೆ ಮೂರು ದೈವದ ಭಿನ್ನಮುಖ ನಾಲ್ಕು
ತನ್ನ ನೆನಹಿನವೋಲುಕಾರ್ಯವು
ಚೆನ್ನಹಡೆ ಲೋಕಕ್ಕೆ ತಾ ಬೇ
ರಿನ್ನು ದೈವವದೇಕೆ ತಾನೇ ದೈವರೂಪೆಂದ ||೫||

ಒಂದು ವರ್ಣವನರುಹಿದವ ಗುರು
ವೊಂದಪಾಯದಲುಳುಹಿದವ ಗುರು
ಬಂದ ವಿಗ್ರಹದೊಳಗೆ ರಕ್ಷಿಸಿದಾತ ಪರಮಗುರು
ಒಂದೆರಡು ಮೂರೈಸಲೇ ತಾ
ನೆಂದು ಗರ್ವೀಕರಿಸಿದವರುಗ
ಳೊಂದುವರು ಚಾಂಡಾಲ ಯೋನಿಯೊಳರಸ ಕೇಳೆಂದ ||೬||

ತನ್ನ ಕಾರಿಯವ ಕಾರಣವನುಳಿ
ದನ್ಯಥಾ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆಮಾಡುವುದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲವೆಂದನಾ ವಿದುರ ||೭||

ಹಾವು ಹಲವನು ಹಡೆದು ಲೋಕಕೆ
ಸಾವ ತಹವೊಲು ನೂರು ಮಕ್ಕಳ
ನಾವ ಪರಿಯಲಿ ಹಡೆದು ಕೆಡಿಸಿದೆ ಭೂಮಿ ಭಾರಕರ
ಭಾವಿಸಲು ಸರ್ವಜ್ಞ ಸರ್ವ ಗು
ಣಾವಲಂಬನನೋಬ್ಬನರ್ಜುನ
ದೇವ ಸಾಲದೆ ನಾಡ ನಾಯಿಗಳೇನು ಫಲವೆಂದ || ೮ ||

ದೀಪ ದೀಪವ ತೊಳಲಿ ಕರ್ಮ ಕ
ಳಾಪದಲಿ ಕುದಿಕುದಿದು ನಾನಾ
ರೂಪಿಂದಾರ್ಜಿಸುವ ಧರ್ಮದ ಗೊಡವೆ ತಾನೇಕೆ
ಭೂಪ ಕೇಳೈ ಸತ್ಯವೊಂದೇ
ಸೋಪನವು ಸಗ್ಗಕ್ಕೆ ಜನ್ಮದ
ಕೂಪರಕ್ಕಿದು ನಾವೆಯಾಗಿಹುದೆಂದನಾ ವಿದುರ||೯||

ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಾರ್ಜಿಸಿದುರಗನಂದದಲಿ
ಕಾಪಥವನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವಗುಣವೆಂದ||೧೦||

ಬವರ ಮುಖದಲಿ ವೈರಿರಾಯರ
ನವಗಡಿಸಿ ತಂದಾ ಧನವ ಭೂ
ದಿವಿಜ ಸಂತತಿಗಿತ್ತು ಫಲವಿನಿತೆಂದು ಗಣಿಸುವಡೆ
ದಿವಿಜಪತಿಗಾಗದು ಕಣಾ ಮಾ
ನವಪತಿಗೆ ಸದ್ಧರ್ಮವಿದು ನಿ
ನ್ನವನು ನೀತಿಯನರಿಯನೈಧೃಥರಾಸ್ಟ್ರ ಕೇಳೆಂದ||೧೧||

ಧರಣಿಯಮರರ ಧನದಿ ಸಲಹಿದ
ಕರಿತುರಗ ಮೊದಲಾದ ದಳವು
ಬ್ಬರದಿ ಹೆಚ್ಚಿಹುದರಿನೃಪಾಲರ ಯುದ್ಧ ಪರಿಯಂತ
ಜರಿದು ನಸಿವುದು ವಾಹಿನಿಗೆ ಮಲೆ
ತುರು ಮಳಲ ಕಟ್ಟೆಯವೊಲಿದನರಿ
ದರಸುಗಳು ವರ್ಣೋತ್ತಮರ ದೆಸೆಗಂಜಬೇಕೆಂದ||೧೨||

ಉರಗನೌಡಿದೊಡದರ ವಕ್ತ್ರದೊ
ಳಿರದೆ ಮೇಣಾ ದಷ್ಟದೇಹದೊ
ಳಿರದೆ ರುಧಿರವು ಪೋಪವೊಲು ದುಷ್ಟಾಧಿಕಾರಿಗಳ
ಒರಸೊರಸಿನಿಂ ಜನಪದದ ಧನ
ಹರಿವುದರಸಂಗಲಸಿದಾ ಪ್ರಜೆ
ಗಿರದುಭಯ ಪಿಂಗುವುದನರಿ ಭೂಪಾಲ ಕೇಳೆಂದ||೧೩||

ಉರಗನಗಿದೊಡೆ ಮೇಣು ಶಸ್ತ್ರದ
ಲಿರಿದಡೊಬ್ಬನೆ ಸಾವನದರಿಂ
ದರಸು ನೆಗಳಿದ ಮಂತ್ರ ಭೇದಿಸಲರಿನೃಪಾಲಕರ
ಧರೆ ಸಹಿತ ತತ್ಸಕಲ ಬಲ ಸಂ
ಹರಣವಹುದಿದನರಿದು ಭೂಪೋ
ತ್ತರ ರಹಸ್ಯದ ಮಂತ್ರವುಂಟೇ ರಾಯ ನಿನಗೆಂದ||೧೪||

ಏಸು ಧರ್ಮದಲಾರ್ಜಿಸಿದ ಧನ
ವೈಸು ಸಿರಿ ವರ್ಧಿಸುವುದದರಿಂ
ದೇಶಮಂಗಳ ಪುತ್ರ ಮಿತ್ರ ಕಳತ್ರವರಿವಿಜಯ
ಪೈಸರಿಸುವುದು ಬಂದ ಬಳಿವಿಡಿದು
ದಾಸುರದ ಪಥವಿದನರಿದು ಭೂ
ಮೀಶ ಧರ್ಮವ ಹಿಡಿಯಧರ್ಮವ ಬಿಟ್ಟು ಕಳೆಯೆಂದ||೧೫||

ಹರಿವ ನದಿ ತನ್ನಿಚ್ಛೆಯಲಿ ದಡ
ವೆರಡ ಕೆಡಿಸುವವೋಲು ನಾರಿಯ
ರುರವಣೆಗೆ ಕೈಗೊಟ್ಟು ನಡೆಸಿದಡುಭಯ ವಂಶವನು
ನೆರಹುವಳು ನೀರೊಳಗೆ ಮೇರೆಯ
ಮುರಿಯಲೀಯದೆ ಮಾರ್ಗದಲಿ ಮ
ತ್ಸರಿಸದಾಳುವುದನುನಯವು ಭೂಪಾಲ ಕೇಳೆಂದ||೧೬||

ಧರೆಯೋಳಗೆ ಕಡು ಮೂರ್ಖರಿವರಿ
ಬ್ಬರು ಕಣಾ ದುರಿಯೌಧನನು ದಶ
ಶಿರನು ಗೋಗ್ರಹಣದಲಿ ವನಭಂಗದಲಿ ಮುಂಕೊಂಡು
ಅರಿನೃಪರ ಸತ್ವಾತಿಶಯದು
ಬ್ಬರದ ಬಲುಹನು ಕಂಡು ಕಂಡೆ
ಚ್ಚರದೆ ಮರುಳಹುದುಚಿತವೇ ಭೂಪಾಲ ಕೇಳೆಂದ||೧೭||

ಕರಣಿಕನ ಹಗೆಗೊಂಡವಂಗೈ
ಶ್ವರಿಯ ಹಾನಿ ಚಿಕಿತ್ಸಕನನಾ
ದರಿಸದಾತಂಗಾಗದಾಯುಷ್ಯಭಿವೃದ್ಧಿಗಳು
ಅರಸ ಕೇಳಾಯುಷ್ಯ ಭಾಗ್ಯಗ
ಳೆರಡು ಕೆಡುವುವು ತಪ್ಪದವನೀ
ಸಂತರ ಬದ್ಧದ್ವೇಷ ಲೇಸಲ್ಲೆಂದನಾ ವಿದುರ ||೧೮||

ಧರೆಯೊಳಗೆ ರವಿಮಂಡಲವನೊದೆ
ದುರವಣಿಸಿ ಹಾಯ್ವವರು ತಾವಿ
ಬ್ಬರು  ಕಣಾ ಸನ್ಯಾಸಿಯಾಗಿಯೆ ಯೋಗಮಾರ್ಗದಲಿ
ಹರಣವನು ಬಿಟ್ಟವರುಗಳು ಸಂ
ಗರದೊಳಭಿಮುಖರಾಗಿ ಮರಣಾಂ
ತರವನೆಯ್ದುವರವರು ಅವನೀಪಾಲ ಕೇಳೆಂದ ||೧೯||

ಮಾತೃಪಿತೃಗಳು ಶತೃಭಾವವ
ನಾಂತು ನಿಜಸಂತಾನದಲಿ ಸಂ
ಪ್ರೀತಿಯನ  ನೆಲೆಗೊಳಿಸಿ ಸರ್ವಜ್ಞಾಧಿಕಾರದಲಿ
ಖ್ಯಾತರನು ಮಾಡದಡೆ ಹಂಸ
ವ್ರಾತ ಮಧ್ಯದಲ್ಲಿ ಬಕನವೊಲು ವಿ
ಖ್ಯಾತ ಸಭೆಯೊಳು ಯೋಗ್ಯರಹರೇ ಭೂಪ ಕೇಳೆಂದ ||೨೦||

ಸುರರ ಮೇಳದಲಾಡುವವರಿ
ಬ್ಬರು ಕಣಾ ಪ್ರಭುವಾಗಿಯು ಕ್ಷಮೆ
ವೆರಸಿದವನು ದರಿದ್ರನಾಗಿಯು ದಾನಿಯೆನಿಸುವನು
ಅರಿದೆನಿಸದತಿಬಲನ ಧರ್ಮೋ
ತ್ಕರುಷ ದುರ್ಬಲಯುತನ ಸೈರಣೆ
ಸರಿಸವೆನಿಸದು ರಾಯ ಚಿತ್ತೈಸಂದನಾ ವಿದುರ||೨೧||

ಧರಣಿ ನುಂಗುವಳಿಬ್ಬರನು ಸಂ
ಗರವ ಜಯಿಸದ ನೃಪನ. ದೇಶಾಂ
ತರವ ಚರಿಸದ ಪಂಡಿತನನಿದು ಶಾಸ್ತ್ರಸಿದ್ಧವಲೆ
ಅರಸು ಕುಲದಲಿ ಹುಟ್ಟಿ ಸಾಪ
ತ್ನರುಗಳಿರೆ ದೇಹಾಭಿಲಾಷೆಯ
ಲುರಗನಂತೋಳಗಿಹುದು ಧರ್ಮವೆಯೆಂದನಾ ವಿದುರ||೨೨||

ನರ ಜನುಮವತ್ಯಧಿಕವದರೊಳು
ಗುರು ಹಿರಿಯರಿವರೆಂದು ದಾನ
ಕ್ಕರುಹರಿವರಲ್ಲೆಂದು ನೋಡದೆ ಮೂಢ ಮಾರ್ಗದಲಿ
ಕರೆದಪಾಯತ್ರಂಗಿತ್ತು ಪಾತ್ರನ
ಪರಿಹರಿಸಲೀ ಎಲಡರಿಂ ಸಂ
ಹರಣವೈವುದಾರ್ಜಿಸಿದ ಧನವರಸ ಕೇಳೆಂದ ||೨೩||

ತಂದೆ ತಾಯಿಗಳಿಬ್ಬರಾತ್ಮಜ
ವೃಂದವನು ಮಿಗೆ ಸಲಹಿ ತತ್ಸುತ
ರಿಂದ ಲೇಸನು ಪಡೆವವೊಲು ತಜ್ಜನಪದದ ಧನವ
ಕುಂದಿಸದೆ ನೃಪ ಮಂತ್ರಿಗಳು ಸಾ
ನಂದದಲಿ ರಕ್ಷಿಸಲು ಬಳಿಕವ
ರಿಂದ ಸಕಲೈಶ್ವರ್ಯ ಪದವಹುದರಸ ಕೇಳೆಂದ||೨೪||

ಕಾಮಿನಿಯರುಗಳಾರು ಕೆಲಬರು
ಕಾಮಿತವ ಕಾಮಿಸುವರಲ್ಲದೆ
ತಾಮಸದಿನಾ ಮೂರುಕರು ಪೂಜಿಸಿದ ಪೂಜೆಗಳ
ಪ್ರೇಮದಿಂದೊಡಬಢುವರಲ್ಲದೆ
ಸೀಮೆವಿಡಿದಾಗದೆಂಬುದ
ನಾ ಮದಾಂಧರು ಬಲ್ಲರೇ ಧೃತರಾಷ್ಟ್ರ ಕೇಳೆಂದ ||೨೫||

ತನ್ನ ಸುಖ ದುಃಖಂಗಳಿಗೆ ನಿ
ರ್ಭಿನ್ನರಹ ಬಾಂಧವರ ವರ್ಜಿಸಿ
ಗನ್ನಗತಕದಲುಂಡು ಜಾರುವ ಗಾವಿಲರ ಕೂಡಿ
ಅನ್ಯರನು ಪತಿಕರಿಸಿ ಬಹುಮಾ
ನೋನ್ನತಿಕೆಯನು ವಿರಚಿಸುವುದಿದು
ತನ್ನ ತಾನೇ ಕೊಂದುಕೊಂಬುದು ಭೂಪ ಕೇಳೆಂದ ||೨೬||

ಪಿತನಿರಲು ದಾತಾರನಿರಲು ನಿಜ
ಪತಿಯಿರಲು ಸುತ ದಾಸ ಸತಿಯೀ
ತ್ರಿತಯರುಂ ಸ್ವಾತಂತ್ರ್ಯದವರಲ್ಲಾ ಕಾಲದಲಿ
ಕ್ಷಿತಿಯೊಳುತ್ತಮ ಮಧ್ಯಮಾಧಮ
ಗತಿಯ ಪುರುಷತ್ರಯವನವರಿಂ
ಗಿತವನವರಾಯತವನರಿವೈ ಭೂಪ ಕೇಳೆಂದ ||೨೭||

ಬೆಳಸು ಘನ ತೃಣವಧಿಕ ಜಲ ನಿ
ರ್ಮಳವೆನಿಪ ಕಾಲದಲಿ ಪರಮಂ
ಡಲಕೆ ನಡೆವುದು ಘೃಷ್ಟಪುಷ್ಟವಿಹಾರನೆಂದೆನಿಸಿ
ಬಲುಹಹುದು ನಿಜಬಲಕೆ ಬಲವಾ
ನೆಲನ ಮೆಟ್ಟಲು ವೈರಿ ಸೇನಾ
ವಳಿಗೆ ಹೀನತೆ ದೊರಕುವುದು ಧೃತರಾಷ್ಟ್ರ ಕೇಳೆಂದ ||೨೮||

ಮಾಲೆಗಾರ ಸಿಳೀಮುಖನ ಪಶು
ಪಾಲಕನವೊಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ ||೨೯||

ಎಲ್ಲಿಹುದು ಋಣಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದುಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜಾಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ ||೩೦||

ರಕ್ಷಿಸೀದ ಧನದಿಂ ಪುರಂಧ್ರಿಯ
ರಕ್ಷಿಸುವುದು ಪುರಂಧ್ರಿಯಿಂದವೆ
ರಕ್ಷಿಸುವುದಾತ್ಮನನು ಧನವಿಡಿದಾವ ಕಾಲದಲಿ
ಲಕ್ಷ ಭೇದವನರಿದು ನಡೆದು ವಿ
ಲಕ್ಷವನು ಮುರಿದಾತ್ಮ ರಕ್ಷೆಯ
ನೀಕ್ಷಿಸುವುದನುನಯವಲೈ ಭೂಪಾಲ ಕೇಳೆಂದ ||೩೧ ||

ತಿಳಿದು ನಾಲ್ವರೊಳೊರೆದ ಕಾರ್ಯವ
ನುಳಿವುದಿಬ್ಬರನಿಬ್ಬರೊಳು ಮ
ತ್ತುಳಿವುದೊಬ್ಬನನೊಬ್ಬನಿಂ ನಿಶ್ಚಯಿಸಿ ಬಳಿಕವನ
ಕಳೆದು ತಾನೇ ತನ್ನೊಳಗೆ ಬಗೆ
ಗೊಳೆ ವಿಚಾರಿಸಿ ಮಾಳ್ಪ ಕಾರ್ಯಕೆ
ಹಳಿವು ಹೊರುವುದೆ ರಾಯ ಚಿತ್ತೈಸೆಂದನಾ ವಿದುರ ||೩೨||

ಹಿರಿದು ಮಾನೋನ್ನತಿಕೆಯನು ಬಂ
ಧುರದ ಧನವನು ಗಾರುಹಸ್ತ್ಯದ
ಪರಮಧರ್ಮವನಾವಬಯಸುವನವನ ಭವನದಲಿ
ನಿರುತ ವೃದ್ಧ ಜ್ಞಾನಿ ವಂಶೋ
ತ್ತರ ದರಿದ್ರಪ್ರಿಯನಪತ್ಯಾಂ
ತರ ಭಗಿನಿಯೀ ನಾಲ್ವರಿರಬೇಕೆಂದನಾ ವಿದುರ ||೩೪||

ಧರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರಗುರು ದೇ
ವರಲಿ ಸಂಕಲ್ಪವನು ಕೃತವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣ ಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ ||೩೫||

ಆವುದೀ ಲೋಕಕ್ಕೆ ಹಿತವದ
ನೋವಿ ನಡೆವ ಜನಕ್ಕೆ ನಿಂದೆಯ
ದಾವುದದನಾಚರರಿಸದಿಹ ನಾಸ್ತಿಕರ ನಂಬುಗೆಯ
ಠಾವುಗಾಣದ ತತ್ವ ವಿಜ್ಞಾ
ನಾವಲಂಬನನೆನಿಪನಾತನು
ಭೂವಲಯದೊಳಗುತ್ತಮನು ಭೂಪಾಲ ಕೇಳೆಂದ ||೩೬||

ಪಿತನು ಗುರು ಶಿಖಿಯಾತ್ಮ ತಾಯೆಂ
ಬತುಳ ಪಂಚಾಗ್ನಿಯನು ಕ್ರಮದಿಂ
ಪ್ರತಿದಿನಂ ಪರಿಚರಿಯ ಮಾಳ್ಪುದು ಲೇಸ ಬಯಸುವರೆ
ಪಿತೃಗಳು ದೇವರನು ವೋದ್ಧರ
ನತಿಥಿಗಳ ಪೂಜಿಸಿದನಾವವ
ಪಿತನ ಕೀರ್ತಿಯ ಧರ್ಮವನು ಪಡೆವವನೆ ಸುತನೆಂದ ||೩೭||

ಸಿರಿಯನುಳ್ಳವನವನೆ ಕುಲಜನು
ಸಿರಿಯನುಳ್ಳವನೇ ವಿದಗ್ಧನು
ಸಿರಿಯನುಳ್ಳವನೆ ಮಹಾತ್ಮನು ಸಕಲಗುಣಯುತನು
ಸಿರಿಯನುಳ್ಳವನೇ ಸುಶೀಲನು
ಸಿರಿರಹಿತ ಶಿವನಾದೊಡಾಗಲಿ
ಸರಕು ಮಾಡದು ಲೋಕವವನೀಪಾಲ ಕೇಳೆಂದ ||೩೮||

ಸಿರಿ ನೆಲೆಯೆ ಜವ್ವನ ನೆಲೆಯೆ ಮೈ
ಸಿರಿ ನೆಲೆಯೆ ತನು ನೆಲೆಯೆ ಖಂಡೆಯ
ಸಿರಿ ನೆಲೆಯೆ ನಿನಗರಸುತನವುಳ್ಳನ್ನ ನೀತಿಯಲಿ
ಧರೆಯ ರಕ್ಷಿಸು ಬಂಧುಗಳನು
ದ್ಧರಿಸು ಧರ್ಮವ ಸಾಧಿಸಿಂತಿದು
ನರಪತಿಗಳಿಗೆ ನೀತಿ ಚಿತ್ತೈಸೆಂದನಾ ವಿದುರ ||೩೯||

ವರುಷವೈದರೊಳರಸೆನಿಸಿ ದಶ
ವರುಷ ದಾಸತ್ವವನು ಭಾವಿಸಿ
ವರುಷ ಹದಿನಾರರಲಿ ಪುತ್ರನ ಮಿತ್ರನೆಂದೆನಿಸಿ
ಪರಿವಿಡಿಗಳಲಿ ನಡೆಸಿ ಮದ ಮ
ತ್ಸರವ ಮಾಣಿಸಿ ನೆರೆದ ಮಕ್ಕಳ
ನರಮೃಗಶ ಮಾಡುವರೆ ಭೂಮಿಪಾಲ ಕೇಳೆಂದ ||೪೦||

ಧನಮದದಿ ಕುಲಮದದಿ ವಿದ್ಯಾ
ಘನದಿ ಯವ್ವನ ಮದದಿ ದ್ವಿಜ ಗುರು
ವನು ವಿಭಾಡಿಸಿ ನೀನು ತಾನೆಂದೆನುತ ಹೂಂಕರಿಸಿ
ಮುನಿಸಿನಲಿ ಸಾತ್ವಿಕರೊಳೊಬ್ಬರ
ನನುಗೂಡಿಸಿ ಗರ್ಜಿಸಲು ನರಕದಿ
ಮುಣುಗಿದಲ್ಲದೆ ಬೇರೆ ಗತಿಯಿಲ್ಲೆಂದನಾ ವಿದುರ ||೪೧||

ಸಲಹಿದೊಡೆಯನ ದಿವ್ಯಮಂತ್ರವ
ಕಲಿಸಿದಾಚಾರ್ಯನನು ಅನುವರ
ದೊಳಗೆ ತಲೆಗಾಯಿದನ ದುರ್ಭಿಕ್ಷದಲಿ ಸಲಹಿದನ
ಜಲದೊಳಾಳ್ದನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ನಿಳಿವನೈ ಕುಲಕೋಟಿ ಸಹಿತ ಮಹಾಂಧ ನರಕದಲಿ ||೪೨||

ಒಲಿದವಳ ಬಿಸುಟೊಲ್ಲದವಳಿಗೆ
ಹಲುಬುವವನಹಿತರಲಿ ಸಖ್ಯಾ
ವಳಿಯನೆಸಗುವವನರಿಯದದು ತಾ ಬಲ್ಲೆನೆಂಬುವನ
ಒಲಿದು ಕೇಳದೆ ಹೇಳುವವ ಕೈ
ನಿಲುಕಲರಿಯದ ಕಾರ್ಯದಲಿ ಹಂ
ಬಲಿಸಿ ಮರುಗುವನವನೆ ಮೂಢನು ರಾಯ ಕೇಳೆಂದ ||೪೩||

ಹರುಷ ದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೈಸಲದರಿಂ  
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು ||೪೪||

ಕರೆಕರೆದು ಮೃಷ್ಟಾನ್ನವನು ಭೂ
ಸುರರಿಗೀವ ಸದಾಗ್ನಿಹೋತ್ರಾ
ಚರಿತವನು ವೇದಾಂತ ವೇದಿಯನಾ ಪತಿವ್ರತೆಯ
ಉರುತರದ ಮಾಸೋಪವಾಸಿಯ
ನಿರದೆ ಮಾಸ ಸಹಸ್ರ ಜೀವಿಯ
ನರಸ ಕೇಳಭಿವಂದಿಸುವರೈ ಮೂರು ಮೂರ್ತಿಗಳು||೪೫||

ಬಿಸುಟು ಕಳೆವುದು ನೀತಿ ಶಾಸ್ತ್ರವ
ನುಸುರದಾಚಾರಿಯನ ವೇದ
ಪ್ರಸರವಿಲ್ಲದ ಋಷಿಜನವ ರಕ್ಷಿಸದ ಭೂಭುಜನ
ಒಸೆಯದಬಲೆಯನೂರೊಳಾಡುವ
ಪಶುವ ಕಾಯ್ದನನಡವಿಗುರಿಯಹ
ನುಸಿಯನಾ ಪಿತನಿಂತರುವರನು ರಾಯ ಕೇಳೆಂದ||೪೬||

ವ್ಯಸನವೇಳರ ಕಾಲುಕಣ್ಣಿಯ
ಹಸರದೊಳಗಳವಳಿದು ಹೆಚ್ಚಿದ
ವಿಷಮದಿರುಬಿನೊಳದ್ದು ಮಾಯಾಮಯದ ತೋಹಿನಲಿ
ಬಸವಳಿದು ಷಡುವರ್ಗ ವೇಧೆಯ
ನುಸುಳುಗಂಡಿಯನೀಕ್ಷಿಸದೆ ತಾ
ಮಸದಥಳಿರುತಿಹುದುಚಿತವೇ ಹೇಳೆಂದನಾ ವಿದುರ ||೪೭||

ಅತಿಬಲನ ಹಗೆಗೊಳುವನಿಹಪರ
ಗತಿ ವಿಚಾರವ ಮರೆವ ಲೋಕ
ಸ್ಥಿತಿಯನುಲ್ಲಂಘಿಸುವ ಮರ್ಮಜ್ಞರ ವಿರೋಧಿಸುವ
ವಿತತ ಭಾಷಿತನಪ್ಪ ತನ್ನಿಂ
ಗಿತವನವರಾಯತವನರಿಯದ
ಕ್ಷಿತಿಪನವ ಮೂಢಾತ್ಮನೈ ಭೂಪಾಲ ಕೇಳಿಂದ ||೪೮||

ಬಲಹರಿದು ಕೋಪಿಸುವ ಬದುಕಿನ
ಬಳಿಯರಿದು ಕೊಡುವಾತ್ಮಹಿತವನು
ತಿಳಿದು ನಿರ್ಮಲವೆನಿಪ ಮೇಲಣ ತಾಗು ಬಾಗುಗಳ
ಹೊಲಬರಿದು ಸುಖ ದುಃಖದಲಿ ಸಂ
ಚಲಿಸದಿಹ ಗಂಗಾ ಮಡುವಿನಂ
ತೊಳಗುದೋರದೆ ನಡೆವವನು ಪಂಡಿತನು ಕೇಳೆಂದ||೪೯||

ದಾನವಿಲ್ಲದ ವಿತ್ತ ಬುಧ ಸ
ನ್ಮಾನವಿಲ್ಲದ ರಾಜ್ಯ ಬಲು ಸುಯಿ
ಧಾನವಿಲ್ಲದ ಸುದತಿ ಧೀಮಾನಿಲ್ಲದಾಸ್ಥಾನ
ಜ್ಞಾನವಿಲ್ಲದ ತಪವು ವೇದ ವಿ
ಧಾನವಿಲ್ಲದ ವಿಪ್ರ ಶರಸಂ
ಧಾನವಿಲ್ಲದ ಸಮರ ಮೆರೆಯದು ರಾಯ ಕೇಳೆಂದ ||೫೦||

ದಿನವಬಂಜೆಯ ಮಾಡದಹಪರ
ವಿನಯನಹ ವರ ದೈವ ಗುರು ಪೂ
ಜನೆಯ ಭುಧ ಸೇವನೆಯ ಕಾಲೋಚಿತದ ವಿವರಣವ
ಮನನದಿಂದಾ ಶ್ರವಣ ವಿದ್ಯಾ
ಸನದಿನಿವನನುಗೊಳಿಪನಾವನು
ಮನುಜರೊಳಗುತ್ತಮನೆಲೆ ಭೂಪಾಲ ಕೇಳೆಂದ ||೫೧||

ಸಲುವೆನೆಂದಂತಃಪುರಕೆ ಸಂ
ಚಲಿಸುವವನಾಪ್ತರನು ಬಿಸುಟ
ಗ್ಗಳಿಸುವವನಹಿತರಲಿ ಧರ್ಮವನುಳಿದಧರ್ಮವನು
ಬಳಸುವವನೇಕಾಂತದಲ್ಲಿಗೆ
ಸುಳಿವವನು ಹಸಿವಿಲ್ಲದುಂಬುವ
ನಿಳೆಯೋಳಗೆ ಮೃಢಾತ್ಮನೈ ಧೃತರಾಷ್ಟ್ರ ಕೇಳೆಂದ||೫೨||

ಬುಧರೊಳಗೆ ಹಗೆಗೊಳುವ ಬುಧರಂ
ನಿಧನಗೆಯ್ದಿಪ ಬುಧರನೇಳಿಪ
ಬುಧರ ಜರದೊಡೆ ನಲಿವ ಬುಧರಂ ಪೋಗಳ್ದರಂ ಪಕ್ಷಿವ
ಬುಧರನಧಮರಮಾಳ್ವ ಬುಧರಂ
ವಿಧಿಗೊಳಿಪ ಬುಧರ್ಗೀವರಂ ಕವ
ರ್ವಧಮ ಭೂಪರಿಗಂಟದಿಹುದೆ ವಿನಾಶಕರವೇಂದ ||೫೩||

ಕುಸುಮ ಫಲ ತಾಂಬೂಲ ಗಂಧ
ಪ್ರಸರ ಭೋಜನ ಗಮನ ನೆನಹಿಂ
ದೆಸೆವ ಕಾರ್ಯದೊಳನಿಬರೊರಗಿದಡೊಬ್ಬ ನೆಚ್ಚರಿಕೆ
ಎಸೆಯಲನಿತುವನೊಬ್ಬನೇ ಭೋ
ಗಿಸುವಡವನೀಪಾಲರಿಗೆ ತಾ
ಸಸಿನವೆನಿಸದು ರಾಯ ಚಿತ್ತೈಸೆಂದನಾ ವಿದುರ ||೫೪||

ಕಳಿದ ತರಣಿಯ ಕಿರಣದಲಿ ನಿ
ರ್ಮಲಿನ ಜಲದಲಿ ದುಗ್ಧ ಪಾನಂ
ಗಳಲಿ ವರಯುವತಿಯರ ಸಂಭೋಗಾಂತರಂಗದಲಿ
ತಳಿತ ಹೋಮದ ಹೊಗೆಗಳಲಿ ದಿನ
ಬಲದೊಳಾಯುಷ್ಯಾಭಿವೃದ್ಧಿಯ
ಬೆಳವಿಗೆಗಳಹವರಸ ಚಿತ್ತೈಸೆಂದನಾ ವಿದುರ ||೫೫||

ಎಳೆಯ ರವಿ ರಶ್ಮಿಯಲಿ ಪ್ರೇತಾಂ
ಗಳದ ಧೂಮಜ್ವಾಲೆಯಲಿ ಗಾ
ವಿಲ ವಯೋವೃದ್ಧೆಯರ ಸಂಭೋಗಾಂತರಂಗಳಲಿ
ಕೊಳಚೆ ನೀರಿನ ಬಳಕೆಯಲಿ ಕ
ತ್ತಲೆಯ ದಧ್ಯೋದನದಲಾಯುಷ
ವಿಳಿದು ಹೋಗದೆ ದಿನ ದಿನದೊಳವನೀಶ ಕೇಳೆಂದ ||೫೬||

ಮಸುಳಿಸಿದ್ದ ದುಕೂಲ ರದನದೊ
ಳೆಸೆವ ಹಾವಸೆ ಭುಕ್ತದುನ್ನತ
ದೆಸಕ ನಿಷ್ಠುರ ವಾಕ್ಯವುದಯಾಸ್ತಮಯ ಕಾಲದಲಿ
ಎಸೆವ ನಿದ್ರಾಂಗನೆಯೊಳೊಂದಿರೆ
ಬಿಸಜಲೋಚನನಾದೊಡೆಯು ವ
ರ್ಜಿಸುವಳವರನು ಭಾಗ್ಯಸಿರಿ ಭೂಪಾಲ ಕೇಳೆಂದ ||೫೭||

ಒಂದು ಮೊದಲಾರಂತ್ಯವಾದಾ
ಸಂದ ಪೂಗಫಲಕ್ರಮಂಗಳ
ಚಂದವನು ಚಿತ್ತೈಸು ಲಾಭಾಲಾಭ ಸುಖದುಃಖ
ಕುಂದದಿಹುದಾಯುಷ್ಯ ಮರಣವಿ
ದೆಂದು ತತ್ಕಾಲದಲಿ ಭೋಗಿಸು
ವಂದವನು ಚಿತ್ತೈಸುವುದು ತಾಂಬೂಲಧಾರಕನು ||೫೮||

ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳೆಂದ ||೫೯||

ಸ್ಥಾನ ಪಂಚಕದಿಂದ್ರಿಯದ ಸಂ
ಸ್ಥಾನದಲಿ ನಿದ್ರಾಂಗನೆಯ ಸ
ನ್ಮಾನಿಸುವೊಡಾ ಸಾಧನದ ಪಂಚಕದ ಪರಿವಿಡಿಯ
ಸ್ಥಾನವರಿದಾರೋಗಣೆಯ ಸಂ
ಧಾನದಲಿ ಚಿತ್ತೈಸುವುದು ರಾ
ಜಾನುಮತವಿದು ಸಕಲ ಸುಖಕರವೆಂದನಾ ವಿದುರ ||೬೦||

ಜನಜನಿತ ಮಲ ಮೂತ್ರ ಮೂರಾ
ರೆನಿಸುವುದು ರತಿಯೊಂದು ನಿಜ ಭೋ
ಜನವೆರಡು ಸುಯಿಲೊಂದು ವರ ತಾಂಬೂಲ ಹದಿನೈದು
ಇನಿತುವನು ತಪ್ಪದೆ ನಡೆಸಲಾ
ಜನಪನಾರೋಗಣೆಗೆ ಸುಖ ಸಂ
ಜನಿಸುವುದು ದಿನಚರಿಯದಿಂದವನೀಶ ಕೇಳೆಂದ ||೬೧||

ನೆರೆದ ಸಚರಾಚರವಿದೆಲ್ಲವು
ನರರ ನಿಜಭೋಜನಕೆ ಜನಿಸಿದ
ವರಸ ಕೇಳಿದರೊಳಗೆ ಭೋಜ್ಯಾಭೋಜ್ಯವನು ತಿಳಿದು
ಪರಿಹರಿಸ ಬಲ್ಲವರುಗಳು ಘನ
ತರದ ಸುಕೃತವನೈದುವರು ಭೂ
ವರರೊಳಗೆ ಸಂದೇಹವೇ ಭೂಪಾಲ ಕೇಳೆಂದ ||೬೨||

ತುರಗಹೃದಯಧ್ವನಿಯ ಸಿಡಿಲಿನ
ಧರಧುರದ ಗರ್ಜನೆಯ ನಾರಿಯ
ರಿರವ ಪುರುಷನ ಭಾಗ್ಯದೇವತೆಯೊಲಿವ ಕಾಲವನು
ವರುಷದುದಯವ ಬರನ ಬರವನು
ವಿರಚಿಸುವೊಡೆ ವಿಧಾತೃಗಳವ
ಲ್ಲರಸ ಕೇಳ್ ಮಾನವರಿಗಿದು ಗೋಚರಿಸಲರಿದೆಂದ ||೬೩||

ಬಡತನಗಳಡಸಿದೊಡೆ ಬಂಧುಗ
ಳೆಡಹಿ ಕಾಣರು ಭಂಟ ತಾನಾ
ದೊಡೆಯು ಬಂದಾಪತ್ತಿನೊಳಗೆ ಪರಾಙ್ಮುಖನೆಯಾಗಿ
ನುಡಿಸದವನೇಹಗೆ ಶರೀರದೊ
ಳಡಸಿದಾ ರುಜೆ ಬಾಧೆಗಡವಿಯ
ಗಿಡ ಮರಂಗಳು ರಕ್ಷಿಸವೆ ಹೇಳೆಂದನಾ ವಿದುರ ||೬೪||

ಕಾಲದೊಳಗೆ ವಸಂತ ವಿದ್ಯಾ
ಜಾಲದೊಳಗೆ ಕವಿತ್ವ ಗಜ ವೈ
ಹಾಳಿಯಲಿ ದೇವೇಂದ್ರ ಮಿತ್ರಶ್ರೇಣಿಯೊಳು ವಾಣಿ
ಭಾಳನೇತ್ರನು ದೈವದಲಿ ಬಿ
ಲ್ಲಾಳಿನಲಿ ಮನ್ಮಥನು ಧನದಲಿ
ಹೇಳಲೇನಭಿಮಾನವೇ ಧನವೆಂದನಾ ವಿದುರ ||೬೫||

ಮುಂದೆ ಗುರುವನು ಬಂಧು ಜನವನು
ಹಿಂದೆ ಕರ್ಮಾಂತ್ಯದಲಿ ಸೇವಕ
ವೃಂದವನು ಕೊಂಡಾಡುವುದು ಸಾಹಿತ್ಯ ಭಾವವಿದು
ಹಿಂದು ಮುಂದಾವಾಗ ನಿನ್ನಯ
ನಂದನರ ನಾರಿಯರ ಹೊಗಳುವು
ದಂದವೇ ಭೂಪಾಲ ಚಿತ್ತೈಸೆಂದನಾ ವಿದುರ ||೬೬||

ತುರಗದೆಡಬಲ ಗಜದ ಸಮ್ಮುಖ
ತರುಣಿಯರುಗಳ ಸರ್ವತೋಮುಖ
ಹಿರಿದು ದುರ್ಜನನಿದ್ದ ದೇಶವದೆಯ್ದೆ ವ್ಯಾಘ್ರಮುಖ
ಭರದಿನಾ ದೇಶವನು ಬಿಟ್ಟರ
ವರಿಸದನ್ಯಗ್ರಾಮಗಳ ವನಾಂ
ತರವನೈದುವುದಲ್ಲದಲ್ಲಿಹುದುಚಿತವಲ್ಲೆಂದ ||೬೭||

ಎತ್ತಲೆತ್ತಲು ಪೋಪ ಮನುಜಂ
ಗತ್ತಲತ್ತಲೆ ದೈವ ಕೂಡೆ ಬ
ರುತ್ತಿಹುದು ಬೆಂಬಿಡದೆ ನಾನಾ ದೇಶ ದೇಶದಲಿ
ಮಿತ್ರನುರು ಮಧ್ಯಸ್ಥಪುರುಷನ
ಮಿತ್ರನೌದಾಸೀನನೊಬ್ಬನು
ಕೃತ್ರಿಮನು ಸಹಜೀವಿಯಂತಿವರರಸ ಕೇಳೆಂದ ||೬೮||

ಗುರು ವಿರೋಧ ಮಹೀಬುಧರ ಮ
ತ್ಸರವು ದೈವದ್ರೋಹ ಗುಣ ಸಾ
ಗರನ ಬಂಧು ದ್ವೇಷವತ್ಯಾಲೀಢ ದೀನತನ
ಶರಣಜನ ಪಾಂಡಿತ್ಯವೆಂಬಿವ
ನರವರಿಸದಂಗೈಸೆ ಭೂಪನ
ಸಿರಿಗೆ ಮೊಳೆಯದೆಕೇಡು ಚಿತ್ತೈಸೆಂದನಾ ವಿದುರ ||೬೯||

ಬಲ ಪ್ರಧಾನನ ವೈರ ಹಿತವಹ
ಲಲನೆಯರ ಮನದಳಲು ಹಗೆಯಲಿ
ಬಳಸುವಂತಸ್ಥತೆಯನಾಮಿಕರೊಡನೆ ಕೆಳೆಗೋಷ್ಠಿ
ಬಲದೊಡನೆ ನಿರ್ಬಂಧ ಧರ್ಮದ
ನೆಲೆಯನರಿಯದ ದಾನಿಗಳ ಸಿರಿ
ಸುಳಿವ ಗಾಳಿಗೆ ಮಲೆವ ದೀಪವು ಕೇಳು ಧೃತರಾಷ್ಟ್ರ ||೭೦||

ಹುಸಿ ಪರದ್ರೋಹವು ಪರ ಸ್ತ್ರೀ
ವ್ಯಸನಪೇಯವಸೂಯೆ ಮಾನ್ಯ
ದ್ವಿಷತೆ ಪತಿತ ಸಮೇತವಾತ್ಮಸ್ತುತಿಯೆನಿಪ್ಪಿವನು
ಬಿಸುಟು ತದ್ವಿಪರೀತದಲಿ ವ
ರ್ತಿಸುವನವನೇ ರಾಯನಾತಗೆ
ವಸುಧೆಯೊಳಗೆಣೆ ಯಾವನೈ ಭೂಪಾಲ ಕೇಳೆಂದ ||೭೧||

ಇದು ಸಮಾಹಿತವಿದು ಶುಭೋದಯ
ವಿದು ಸಕಲಪುರುಷಾರ್ಥಸಾಧನ
ವಿದು ಸುಜನಸನ್ಮಾನವಿದು ಸಂಸಾರಸೌಖ್ಯಫಲ
ಇದು ಸುಬಲವಿದಬಲವಿದಾಮ್ನಾಯ
ಯದ ಸುನಿಶ್ಚಯ ನೀತಿ ಕಾರ್ಯದ
ಹದನನರಿದಾಚರಿಸಬಲ್ಲವನವನೆ ಪಂಡಿತನು ||೭೨||

ಶತೃ ಕಾಲ ಸುದೇಶ ವರ್ಗ ಸು
ಮಿತ್ತರುದಯೋಪಾಯಕರಣ ಸು
ಪಾತ್ರವೆಂಬಿವು ಮೂರು ತೆರನಾಗಿಪ್ಪವಿದರೊಳಗೆ
ಕ್ಷತ್ರಧರ್ಮ ವಿವೇಕವೆಂಬಿವ
ನ್ತೋತ್ರಗೊಕ್ಷಿಪನೆ ರಾಯನವಗೆ ಧ
ರಿತ್ರಿಯೊಳಗೆಣೆ ಯಾವನೈ ಭೂಪಾಲ ಕೇಳೆಂದ ||೭೩||

ಎಲ್ಲಿ ಸುಲಲಿತ ವಿದ್ಯೆ ಬಹುಗುಣ
ವೆಲ್ಲಿ ಗಣಿಕಾ ನಿಕರ ಮಣಿ ಗಣ
ವೆಲ್ಲಿ ಗಜ ಜಾತ್ಯಶ್ವವೆಲ್ಲಿ ವರೂಥ ಸಂದೋಹ
ಎಲ್ಲಿ ಸುಭಟ ನಿಕಾಯ ನೆರೆದಿಹು
ದಲ್ಲಿ ತನ್ನಾಧೀನ ಮಾಡಲು
ಬಲ್ಲವನೆ ನೃಪನಾತಗಿದಿರಾರೈ ಧರಿತ್ರಿಯಲಿ ||೭೪||

ದ್ವಾರವೊಂಬತ್ತಿಂದ್ರಿಯದಹಂ
ಕಾರಕರಣಚತುಷ್ಟಯಂಗಳ
ಸಾರಭೂತಾಧಿಕದ ಸುಳಿವಿನ ಪಂಚವಾಯುಗಳ
ಹೋರಟೆಗಳಲಿ ಬಳಲಿ ಜೀವನ
ಧೀರನಹವೊಲು ಪಾಂಡುಪುತ್ರರ
ಕೌರವರ ಬೇಳಂಬದಲಿ ಬೆಂಡಾದೆ ನೀನೆಂದ ||೭೫||

ಮತ್ತನತಿಶ್ರಾಂತನು ಪ್ರಮದೋ
ನ್ಮತ್ತನತಿಕುಪಿತಾನನನು ಚಲ
ಚಿತ್ತನತಿಕಾಮುಕನು ಲುಬ್ಧನು ಶೂರನೆಂಬವನು
ಕ್ಷುತ್ತುಘನವಾಗುಳ್ಳನಿಂತೀ
ಹತ್ತು ಜನವಾವಾಗ ಧರ್ಮದ
ತತ್ತವಣೆಗಳನರಿಯರೈ ಭೂಪಾಲ ಕೇಳೆಂದ ||೭೬||

ದಾನವಿಷ್ಟಾಪೂರ್ತ ವಿನಯ ಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಮಹಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥಬಂಧು ವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು ||೭೭||

ಧರೆಯೊಳೀ ಹೊತ್ತಿನಲಿ ನಿನಗೈ
ಶ್ವರಿಯದಲಿ ಮಕ್ಕಳಲಿ ಖಂಡೆಯ
ಸಿರಿಯಲೊಡಹುಟ್ಟಿದರು ಸಪ್ತಾಂಗದಲಿ ಸತಿಯರಲಿ
ಗುರು ಪಿತಾಮಹ ಬಂಧುಜನ ಮಿ
ತ್ರರಲದಾವುದು ಕೊರತೆ ಕೌಂತೇ
ಯರ ನೆರವಿಗರ ಮಾಡುವರೆ ಧೃತರಾಷ್ಟ್ರ ಕೇಳೆಂದ ||೭೮||

ಉಭಯಕುಲಶುದ್ಧಿಯಲಿ ಹೆಚ್ಚಿದ
ವಿಭವದಲಿ ವಿಗ್ರಹದಲಧಿಕ
ಪ್ರಭೆಗಳಲಿ ಸತ್ಯದಲಿ ಸಾಹಿತ್ತದಲಿ ವಿನಯದಲಿ
ಅಭವನಂಘ್ರಿಯ ಸೇವೆಯಲಿ ಹರಿ
ನಿಭನೆನಿಸಿ ಬದುಕುವನು ರಾಯ ಚಿತ್ತೈಸೆಂದನಾ ವಿದುರ ||೭೯||

ವೇಸಿಯಹ ಪರಿಯಂಕದಲಿ ನಿಜ
ದಾಸಿಯಹ ಶಿಶ್ರೂಷೆಯಲಿ ನಿ
ರ್ದೋಷಿಯಹ ಪತಿಭಕ್ತಿಯಲ ಮೋಹದಲಿ ತಾಯೆನಿಸಿ
ಏಸು ಕಾರ್ಯಕೆ ಮಂತ್ರಿಯೆನಿಸುವ
ಮೈಸಿರಿಯನುಳ್ಳವಳು ರಾಣೀ
ವಾಸವೆಂದೆನಿಸುವಳೆಲೈ ಭೂಪಾಲ ಕೇಳೆಂದ ||೮೦||

ತಂದೆ ತಾಯಿಗಳಾಜ್ಞೆಯನು ಸಾ
ನಂದದಲಿ ಪಾಲಿಸುತ ಮದವನು
ಮುಂದುಗೆಡಸಿ ಸುಧರ್ಮದಲಿ ರಾಜ್ಯವನು ಪಾಲಿಸುತ
ಬಂಧು ಬಳಗವ ಸಲಹಿ ಭೂಸುರ
ವೃಂದವನು ನೆರೆ ಹೊರೆವಡೆವ ಸುತ
ವಂದ್ಯನೈ ಲೋಕಕ್ಕೆ ಚಿತ್ತೈಸೆಂದನಾವಿದುರ ||೮೧||

ಇಹಪರದ ಸುಖಸಂಗತಿಯ ಸಂ
ಗ್ರಹಿಸಿ ವೇದಾಚಾರದಲಿ ಸ
ನ್ನಿಹಿತನಾಗಿ ಸಮಸ್ತ ಕಳೆಯಲಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ ||೮೨||

ಇಂದ್ರಿಯವನೊಡೆತುಳಿದು ಕರ್ಮದ
ಬಂದಿಯನು ತಲೆಬಳಚಿ ವಿಷಯದ
ದಂದುಗವನೀಡಾಡಿ ಮಾಯಾಪಾಶವನು ಹರಿದು
ದ್ವಂದ್ವವಿರಹಿತನಾಗಿ ವಿಶ್ವದ
ಲೊಂದಿ ಮೆರೆಯಲು ಬಲ್ಲವನು ಗುರು
ವೆಂದೆನಿಸುವನು ರಾಯ ಚಿತ್ತೈಸೆಂದನಾ ವಿದುರ ||೮೩||

ಒಡಲೊಡವೆ ಮೊದಲಾದುವೆಲ್ಲವ
ತಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯಬಲ್ಲವನವನೆ ಶಿಷ್ಯನು ರಾಯ ಕೇಳೆಂದ ||೮೪||

ಯುಕುತಿವಿದರುಗಳಾಗಿ ವಿದ್ಯಾ
ಧಿಕರೆನಿಸಿ ಸಮಬುದ್ಧಿಗಳ ನಾ
ಟಕವ ನಟಿಸುತ ಪರಮತತ್ವಜ್ಞಾನಪರರಾಗಿ
ಸಕಲ ಕಳೆಯಲಭಿಜ್ಞರಹ ಧಾ
ರ್ಮಿಕರು ಪರಪುರುಷಾರ್ಥಿಗಳು ವೈ
ದಿಕರಲೇ ವಿದ್ವಾಂಸರೆನಿಸುವರರಸ ಕೇಳೆಂದ ||೮೫||

ದಂಡನೀತಿ ಸ್ಮಾರ್ತ ಶೌಚೋ
ದ್ಧಂಡ ವೇದಾಧ್ಯನ ನಿಪುಣನ
ಪಂಡಿತಪ್ರಿಯ ಶಾಂತಿ ಪೌಷ್ಟಿಕ ಕರ್ಮ ದೀಧಿತನ
ಚಂಡ ದೈವಜ್ಞನನಧಿಕ ಗುಣ
ಮಂಡನನ ಬಹುಶಾಸ್ತ್ರಪಠಣನ
ಪಂಡಿತನ ಪೌರೋಹಿತನ ಮಾಡುವುದರಸ ಕೇಳೆಂದ ||೮೬||

ಸ್ಥೂಲ ಸೂಕ್ಷ್ಮ ಕೃತಜ್ಞನುತ್ಸವ
ಶೀಲನಕ್ರೋಧಿಯನ ದೀರ್ಘ ವಿ
ಶಾಲ ಸೂತ್ರಿಯ ವೃದ್ಧಸೇವಕ ಸತ್ಯ ವಾಕ್ಶುಚಿಯ
ಕಾಲವೇದಿ ವಿನೀತನವ್ಯಸ
ನಾಳಿ ಸೂರಿ ರಹಸ್ಯ ಸತ್ಕೃತಿ
ಪಾಲನಾನ್ವಿತ ಮಂತ್ರಿಯುಂಟೇ ರಾಯ ನಿನಗೆಂದ ||೮೭||

ತುರಗ ಗಜ ಭಟರಳವರಿವ ಸಂ
ಗರ ಮಹೋತ್ಸಾಹನ ಜಿತಶ್ರಮ
ನರಿಕಟಕಭೇದಕನ ನಾನಾಯುಧ ವಿಶಾರದನ
ಭರಿತ ಧೈರ್ಯನ ಪತಿಹಿತನ ಸಂ
ಗರಸದಾರನನೂರ್ಧ್ವರೋಮನ
ನಿರದೆ ಸೇನಾಪತಿಯ ಮಾಡುವುದರಸ ಕೇಳೆಂದ ||೮೮||

ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರನ ಮಂ
ಡಳಿಕ ಸಾವಂತರ ವಿಶೇಷದಲವಸರವನರಿದು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕರ ದುಷ್ಕರ
ತಿಳಿವ ಹೃದಯನ ಸಂಧಿವಿಗ್ರಹರೆನಿಸಬೇಕೆಂದ ||೮೯||

ಮಿಸುಪ ಮಣಿಗಣ ಲೋಹ ಕಾಂಚನ
ವಿಸರ ಭೇದವನರಿವ ಕೊಟ್ಟುದ
ನಸಿಯಲೀಯದೆ ತಾನು ಭಕ್ಷಿಸದಹಿ ನಿಧಾನವನು
ಒಸೆದು ಕಾದಿಪ್ಪಂತೆ ಕಾದಿಹ
ಹುಸಿಯದಾಪ್ತನ ಬಹುಕುಟುಂಬ
ವ್ಯಸನವುಳ್ಳನ ಮಾಳ್ಪುದೈ ಭಂಡಾರ ರಕ್ಷಕನ ||೯೦||

ಮನ ವಚನ ಕಾಯದಲಿ ದಾತಾ
ರನ ಹಿತವನುಳ್ಳನ ವಿನೀತನ
ವಿನುತ ವನಿತಾ ನತಮುಖನ ನಿಷ್ಕಳಿತ ರೋಷಕನ
ಮುನಿವರ ಬುದ್ಧಿಯಲಿ ಸಿಲುಕದ
ವನ ವಿಶೇಷ ಕಳಾಪ್ರವೀಣನ
ಜನಪ ಚಿತ್ತೈಸುವುದೆಲೈ ತಾಂಬೂಲಧಾರಕನ ||೯೧||

ಪಿತೃ ಪಿತಾಮಹ ಸೂಪಶಾಸ್ತ್ರ
ಯುತನ ಕೈಕರಣೆಗಳಲಧಿಕನ
ನತಿ ಶುಚಿಯ ಸಾಧಕನನಕ್ರೋಧಿಯನನಾಲಸನ
ಪತಿಹಿತನ ಷಡುರಸ  ವಿಶೇಷಾ
ನ್ವಿತನನಿತರಾಲಯವಿದೂರನ
ಪತಿಕರಿಸುವುದು ಸೂಪಕಾರತೆಗರಸ ಕೇಳೆಂದ||೯೨||

ನಿಶಿತ ಪರಿಮಳ ಮೋದದಿಂ ಮೋ
ದಿಸುವ ಗಂಧದ್ರವ್ಯದಲಿ ಪಂ
ಠಿಸಿದ ಜೀವನ ಜೀವ ತನ್ನಯ ಜೀವನವೆಯೆಂದು
ವಸುಮತೀಶರಿಗಿತ್ತು ತಾ ಭೋ
ಗಿಸದೆ ಬಳಸದೆ ರಾಜನನೋಲ
ಗಿಸುವವನೆ  ಪಾನೀಯಧಾರಕನರಸ ಕೇಳೆಂದ ||೯೩||

ಉನ್ನತ ರೂಪಾಧಿಕನ ಸಂ
ಪೂರ್ಣದಕ್ಷನನನ್ಯರೆನ್ನವ
ರೆನ್ಷದನ ಪರರಿಂಗಿತಾಕಾರ ಪ್ರಭೇದಕನ
ಮನ್ನಣೆಗೆ ಬೆರೇಯದನನಾಪ್ತನ
ನನ್ಯ ಕಾರ್ಯೋಚಿತ ಸಮಪ್ರತಿ
ಪನ್ನ ಪಡಿಹಾರಕನ ಮಾಡುವುದರಸಕೇಳೆಂದ ||||೯೪||

ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮಪದನಿಗಳ
ನೇಮ ತಪ್ಪದೆ ಹರಣಭರಣದ ಹೆಂಪು ತಿರುಪುಗಳ
ಕೋಮಲಿತ ಶಾರೀರ ಹೃದಯದ
ರಾಮಣೀಯಕ ರಚನೆಯಲ್ಲಿ ಸ
ನಾಮನೆನೆಸುವನವನೆ ಗಾಯಕನರಸ ಕೇಳೆಂದ ||೯೫||

ತಾಳ ಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ಠಾಯ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣ ಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು ||೯೬||

ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ಕೇಳು ಧೃತರಾಷ್ಟ್ರ ||೯೭||

ಎಡ ಬಲನನಾರೈವುತೊಬ್ಬನ
ಬಿಡದೆ ನೋಡುತ ಮಕ್ಷಿಕಂಗಳ
ಗಡಣವನು ಕೆದರಿಸುತ ಕಿಗ್ಗಣ್ಣಿಕ್ಕಿ ಕೆಲಬಲನ
ಜಡಿದು ನೂಕುವ ಸ್ವಾಮಿಕಾರ್ಯದ
ಕಡೆಯೆನಿಸುತಾವಾಗ ಸೇವೆಗೆ
ಸೆಡೆಯದವನೇ ಚಮರಧಾರಕನರಸ ಕೇಳೆಂದ ||೯೮||

ಗುಳಿ ತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಡಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ||೯೯||

ಹರುಷದಲಿ ನಿಜಜನನಿ ಗರ್ಭವ
ಧರಿಸಕೊಂಡಾಡುವವೊಲುತ್ತಮ
ಪುರುಷರಂತರ್ಯಾಮಿಯನು ತಾಳ್ವಂತೆ ಭೂಭುಜರ
ಧರಿಸಿ ಸುಖ ಸಂಗತಿಗಳಲಿ ಸಂ
ಚರಿಸುತಾಳ್ದನ ಹಾನಿ ವೃದ್ಧಿಯ
ಲಿರಲು ಬೆಸದವರೆನಿಸುವರು ಭೂಪಾಲ ಕೇಳೆಂದ ||೧೦೦||

ಹಿಂದೆ ಮಾಡಿದ ಸುಕೃತ ಫಲವೈ
ತಂದು ಸಾರುವವೋಲು ನಾನಾ
ಚಂದದಾಪತ್ತಿನಲಿ ಹರಿನಿಜಭಕ್ತ ಸಂತತಿಯ  
ಮುಂದೆ ನಿಲುವವೊಲವನಿಪಾಲರ
ದಂದುಗದ ಹೊತ್ತಿನಲಿ ಗಜ ಹಯ
ವೃಂದವನೆ ಚಾಚುವನು ವಾಹಕನರಸ ಕೇಳೆಂದ ||೧೦೧||

ಪರ್ಬತವನೊಡೆದುಳಿಸಿ ಭೂಮಿಯ
ನಿಬ್ಬಗೆಯ ಮಾಡಿಸುತ ರಥ ಗಜ
ದೊಬ್ಬುಳಿಯ ಹರೆಗಡಿಸಿ ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರವಳೆಯ ಸುರಿಸುರಿ
ದುಬ್ಬರದ ಬವರದೊಳಗಹಿತರಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ ||೧೦೨||

ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೊಲವು
ತ್ತಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನಕಾಲಾನಲನವನು ತಾ
ಮೊದಲಿಗನಲೇ ರಥಿಕರಿಗೆ ಧೃತರಾಷ್ಟ್ರ ಕೇಳೆಂದ ||೧೦೩||

ಬಿಟ್ಟ ಸೂಟಿಯಲರಿ ನೃಪಾಲರ
ಮುಟ್ಟಿ ಮೂದಲಿಸುತ್ತ ಮೋಹಿದ
ಥಟ್ಟನೊಡಹಾಯ್ದಹಿತ ಬಲದೊಳಗಾನೆವರಿವರಿದು
ಹಿಟ್ಟು ಗುಟ್ಟುತ ಹೆಣನ ವಟ್ಟಾ
ವಟ್ಟಿ ಮಸಗಲು ಕಳನ ಚೌಕದ
ಲಟ್ಟಿಯಾಡಿಸಬಲ್ಲಡವ ರಾವುತನು ಕೇಳೆಂದ ||೧೦೪||

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಖಂಡನ
ಸೂಸಿ ಕಡಿಕಡಿದೊಟ್ಟಿದಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಗೊದಗುವನವನೆ ಕಾಲಾಳರಸ ಕೇಳೆಂದ ||೧೦೫||

ಬರಲು ಕಂಡಡೆ ವಂದಸುತಲಂ
ತರಿಸಿ ಮಿಗೆ ಹತ್ತಿರವೆನಿಸದತಿ
ತರದ ದೂರವ ಸಾರದೀಪರಿ ಮಧ್ಯಗತನೆನಿಸಿ
ಪರಿವಿಡಿಯಲೋಲಗಿಸುತರಸನ
ಸಿರಿಮೊಗವನೀಕ್ಷಿಸುತ ಬೆಸಸಿದ
ನರವರಿಸದಾಕ್ಷಣಕೆ ಮಾಡುವವನೇ ಸೇವಕನು ||೧೦೬||

ಕುನಖಿ ಕುಷ್ಟ ಕುಶೀಲಕನು ಕು
ಬ್ಜನನು ವಿಧವಾಲಿಂಗಿ ದಾಸಿಯ
ತನು ವಿಕಾರಿಯನಂಗಹೀನನ ಪಂಗುಳಾಂಧಕನ
ಘನರುಜಾಂಗನ ಬಿಡುದಲೆಯ ರೋ
ಧಿನಿಯನುಪ್ಪವಡಿಸುವ ಸಮಯದೊ
ಳಿನಿಬರನು ಕಾಣ್ಬುದು ಮಹೀಶರಿಗಂಗವಲ್ಲೆಂದ ||೧೦೭||

ಕಲಶ ಕನ್ನಡಿ ಕರಿ ತುರಗ ಗೋ
ಕುಲ ವೃಷಭ ಬುಧನಿಚಯ ಗಿರಿ ಸಂ
ಕುಳ ಸುವಾಸಿನಿ ಮಾತೃ ಪಿತೃ ವರವಾಹಿನೀಚಯ
ಜಲಧಿವಸನಚ್ಛತ್ರ ಉರ್ವೀ
ಲಲನೆಯರನೀಕ್ಷಿಸುವುದವನಿಪ
ತಿಲಕರುಪ್ಪವಡಿಸುವ ಸಮಯದೊಳರಸ ಕೇಳೆಂದ ||೧೦೮||

ಶ್ವಾನ ಕುಕ್ಕುಟ ಕಾಕ ಬಕ ಪವ
ಮಾನ ಖಗಷಪತಿ ದಿವಿಜ ರಜನಿ ಕೃ
ಶಾನುವಿನ ಗಾರ್ದಭನ ವೃಷಭನ ಶಿಂಶುಮಾರಕನ
ವಾನರನ ಹಯ ಕುಂಜರನ ಪಂ
ಚಾನನನ ಮೃಗಪೋತಕನ ಗುಣ
ವಾ ನರೇಂದ್ರನೊಳಿರಲು ಬೇಹುದು ಭೂಪ ಕೇಳೆಂದ||೧೦೯||

ಪರಿಪರಿಯ ದಾನಂಗಳನು ಕರೆ
ಕರೆದು ಲೋಗರಿಗಿತ್ತು ಪರರನು
ಹೊರೆದು ತನ್ನಾಶ್ರಿತರನತಿಗಳೆದಾಪ್ತ ಬಾಂಧವರ
ಸರಕು ಮಾಡದೆ ಗರ್ವದಿಂದು
ಬ್ಬರಿಸುತಿಹ ಪಾತಕರ ಪದವಿಯ
ನರಸ ಬಣ್ಣಿಸಲಾರು ಬಲ್ಲರು ಯಮನ ನಗರಿಯಲಿ||೧೧೦||

ಮೂರು ಕೋಟಿಯ ಕೋಟಿಧರ್ಮವ
ಮೀರದಿಹ ರೋಮಾಳಿ ಸಂಖ್ಯೆಯೊ
ಳಾರೆನೆನ್ನದೆ ನಿಜಪತಿಯ ಸಹಗಮನದಲಿ ತನುವ
ಮಾರಿದಬಲೆಯರುಗಳ ದೆಸೆಯಿಂ
ದಾರುಮಡಿ ಸ್ವರ್ಗಾದಿ ಭೋಗವ
ಸೂರೆಗೊಂಬುದು ತಪ್ಪದವನೀಪಾಲ ಕೇಳೆಂದ ||೧೧೧||

ಆವನೊಬ್ಬನು ಸತ್ಯಕೋಸುಗ
ಭಾವಶುದ್ಧಿಯಲೊರಡಿಚುವ ಶಪ
ಥಾವಸಾನದಲವನಧರ್ಮದಲರ್ಧನನು ಯಮನು
ಓವನನ್ಯಾಯದಲಿ ಸೂರುಳ
ನೋವಿ ರಚಿಸಿದವಂಗೆ ಗತತಿಯಿ
ನ್ನಾವುದೆಂಬುದನಾರು ಬಲ್ಲರು ಭೂಪ ಕೇಳೆಂದ ||೧೧೨||

ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ ||೧೧೩ ||

ವೈದ್ಯನಲಿ ಮಾಂಸದಲಿ ದ್ವಿಜನಲಿ
ನಿದ್ರೆಯಲಿ ತನುವಿನಲಿ ವನದಲಿ
ವಿದ್ಯೆಯಲಿ ಪದವಿಯಲಿ ಸಂಖ್ಯಸಂಖ್ಯವೆಸರುಗಳಲಿ
ತದ್ವಿಷಯಕೆ ಮಹಾ ಸಬುದವನು
ಹೊದ್ದಿಸುವುದತಿಕಷ್ಟವವರಿಗೆ
ಸದ್ಯಫಲವದು ತಪ್ಪದವನೀಪಾಲ ಕೇಳೆಂದ ||೧೧೪|

ಗರುವ ಮಾನ್ಯನು ಮನಿತ ದೈವಾ
ಪರನು ಕಡುಸುಖಿ ಭೋಗಿ ರೂಪೋ
ತ್ಕರನು ಧನಿಕನು ರಾಜಪೂಜ್ಯನು ಕೀರ್ತಿವಲ್ಲಭನು
ಗುರುಜನಕೆ ಬಹು ವಿದ್ಯವುಳ್ಳವ
ನರಸ ಕೇಳೈ ವಿದ್ಯೆಯಿಲ್ಲದ
ನರನು ನರಪಶುವವನ ಜನ್ಮ ನಿರರ್ಥಕರವೆಂದ||೧೧೫||

ವಿದ್ಯೆ ಸತ್ಕುಲ ಬಹು ವಿವೇಕವು
ಬುದ್ಧಿ ಜಾಣ್ಮೆಯ ನುಡಿಯ ಸಡಗರ
ಶುದ್ಧಚಿತ್ತ ಸುಶೀಲ ಭುಜಬಲ ಭದ್ರನೆಂದೆನಿಸಿ
ಉದ್ಯುಗವು ಮೊದಲಾದ ಗುಣಗಳಿ
ವಿದ್ದು ಫಲಲಲವೇನೀ ಜಗದ ತೊರೆ
ಮದ್ದು ಹೊದ್ದದ ನರಗೆ ದಾರಿದ್ರಾಂಗನಾವರೆಗೆ ||೧೧೬||

ಧರೆಯೊಳಗೆ ಶುಚಿಯಹನು ವೈಶ್ವಾ
ನರನು ಕಾಂತಾದರ್ಶಿಯಹ ಕವಿ
ವರನು ಸುವ್ರತ ಕಾಮನೆನಿಸುವ ಬ್ರಾಹ್ಮಣೋತ್ತಮನು
ಹರಿಹರಾತ್ಮಕ ನಾಮಕೀರ್ತನ
ವೆರಸಿ ಬದುಕುವನೊಬ್ಬನೀ ನಾ
ಲ್ವರುಗಳಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ||೧೧೭|

ಹರಿಭಕುತಿ ಲೋಲುಪನೆನಿಸಿ ಶಂ
ಕರನ ಬದ್ಧದ್ವೇಷಿಯಹ ಶಂ
ಕರನ ಭಕ್ತಿಯೊಳಧಿಕವಾಗಿಯು ವೈಷ್ಣವರ ಮೇಲೆ
ಎರಕವಿಲ್ಲದ ಕರ್ಮ ಚಾಂಡಾ
ಲರುಗಳೆಪ್ಪತ್ತೈದು ಕೋಟಿಯ
ನರಕದೊಳಗೋಲಾಡುತಿಹರೆಲೆ ರಾಯ ಕೇಳೆಂದ ||೧೧೮||

ಯತಿ ಕೆಡುಗು ದುಸ್ಸಂಗದಲಿ ಭೂ
ಪತಿ ಕೆಡುಗು ದುರ್ಮಂತ್ರಿಯಲಿ ವರ
ಸುತ ಕೆಡುಗು ಲಾಲನೆಗಳಲಿ ಕೃಷಿ ಕೆಡುಗುಪೇಕ್ಷೆಯಲಿ
ಮತತಿ ಕೆಡುಗು ಮಧು ಪಾನದಲಿ ಸ
ದ್ಗತಿ ಕೆಡುಗು ದುಶ್ಚರಿತದಲಿ ನಿಜ
ಸತಿ ಕೆಡುಗು ದುರ್ವ್ಯಸನದಲಿ ಭೂಪಾಲ ಕೇಳೆಂದ ||೧೧೯||

ಉಂಡು ತೀರಿಸಬೇಕು ತಾ ಮುಂ
ಕೊಂಡು ಮಾಡಿದ ಪುಣ್ಯ ಪಾಪದ
ತಂಡವನು ತೆರಹರಣವಿಲ್ಲದೆ ಭವ ಭವಂಗಳಲಿ
ಹಿಂಡಿ ಹಿಳಿವುದು ಬೆಂಬಿಡದೆ ಸಮ
ದಂಡಿಯಲಿ ಹಗೆ ಕೆಳೆಗಳೆನ್ನದೆ
ಗಂಡುಗೆಡಿಸದೆ ಬಿಡುವುದೇ ವಿಧಿಯೆಂದನಾ ವಿದುರ ||೧೨೦||

ಸ್ನೇಹಪೂರ್ವಕದಿಂದ ಮನದೊಳ
ಗಾಹಿಸಲು ಲಕ್ಷ್ಮೀಷನವರಿಗೆ
ಬೇಹ ಪುರುಷಾರ್ಥಂಗಳಹವೆಲ್ಲಿದ್ದರಲ್ಲಲ್ಲಿ
ಈ ಹದನು ತಪ್ಪುವುದೆ ಕೂರ್ಮನ
ಮೋಹದಲಿ ತತ್ಸಂತತಿಗೆ ನಿ
ರ್ವಾಹವಹವೋಲರಸ ಚಿತ್ತೈಸೆಂದನಾ ವಿದುರ ||೧೨೧||

ಕೂಡಿದೆಡೆಯಲಕೃತ್ಯ ಶತವನು
ಜೋಡಿಸಿದವರು ಮಿತ್ರರುಗಳಿಗೆ
ಕೇಡ ಚಿಂತಿಸಿದವರುಗಳು ಪುರುಷಾರ್ಥವನು ತಮಗೆ
ಮಾಡಿದವರುಗಳಿಗೆ ವಿಘಾತಿಯ
ಹೂಡಿದವದಿರು ನರಕದೊಳಗೋ
ಲಾಡದಿಹರೇ ರಾಯ ಚಿತ್ಹೈಸೆಂದನಾ ವಿದುರ ||೧೨೨||

ಕುಲಜನಾಗಲಕುಲಜನಾಗಲಿ
ಜಲರುಹಾಕ್ಷನ ನಾಮ ಕೀರ್ತನ
ದೊಳಗೆ ಬದುಕುವನಾವನಾತನೆ ಸುಕೃತಿಯೆಂಬವನು
ಉಳಿದ ಜಪ ತಪ ನಿಯಮ ಹೋಮಂ
ಗಳಲಿ ಸಂಸಾರಾರ್ಣವವನು
ಚ್ಚಳಿಸಬಹುದೇ ರಾಯ ಚಿತ್ತೈಸೆಂದನಾ ವಿದುರ ||೧೨೩||

ಜಾತರೂಪದಲೇಸು ಹೊಲ್ಲೆಹ
ವೀತಿಹೋತ್ರನ ದೇಹಕಾರಣ
ಭೂತವಾಗಿಹುದವಗೆ ಸದಸತ್ತುಗಳ ಭೇದವನು
ನೀತಿ ಮುಖದಿಂದರಿವುದುತ್ತಮ
ನೀತ ಮಧ್ಯಮನೀತ ಕನಿಯಸ
ನೀತವೆಂಬುದನರಸ ಚಿತ್ತೈಸೆಂದನಾ ವಿದುರ ||೧೨೪||

ಅವನಿಯಲಿ ಜನಜನಿತ ಧನ ಧಾ
ನ್ಯವನು ಕಳಹಲಗೈದು ಸಂತೋ
ಷವನು ಮಾಡುವ ಕಡೆಯಲೊಂದಕೆ ನೂರು ಮಡಿಯಾಗಿ
ಲವಲವಿಕೆ ಮಿಗಲಿತ್ತು ಸಪ್ತಾಂ
ಗವನು ಸಲಹುತ್ತಿರಲುಬೇಹುದು
ರವಿಯವೊಲು ಸಾವಿರ ಮುಖದೊಳವನೀಶ ಕೇಳೆಂದ ||೧೨೫||

ಇನನುದಯಿಸಲಿ ಪಶ್ಚಿಮಾದ್ರಿಯೊ
ಳನಲನೊಮ್ಮೆ ಹಿಮಾಂಶುವಾಗಲಿ
ಕನಕಗಿರಿಗಲ್ಲಾಟವಾಗಲಿ ಪರ್ವತಾಗ್ರದಲಿ
ವನಜ ವಿಕಸಿತವಾದೊಡೆಯು ಸ
ಜ್ಜನರುಗಳು ನುಡಿದೆರಡನಾಡರು
ಮನ ವಚನ ಕಾಯದಲಿ ಚಿತ್ತೈಸೆಂದನಾ ವಿದುರ ||೧೨೬||

ಹರನ ಕೊರಳಿಂಗಾಭರಣವಾ
ದುರಗ ಪವನಾಶನವೆನಿಸುವಂ
ತರಸ ನಿನ್ನಯ ಬಸುರ ಬಂದೇನಹರು ಪಾಂಡವರು
ನರಪಶುಗಳಾದರು ಕಣಾ ನೀ
ನಿರಲು ವನವಾಸದಲಿ ಸೊಪ್ಪನ
ವರತ ಮೆಲುವುದೆ ರಾಯ ಚಿತ್ತೈಸೆಂದನಾ ವಿದುರ ||೧೨೭||

ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ರವಿ ಶಶಿಗಳುದಯಾಸ್ತಮಯ ಕಾಲದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ವಿದುರ ||೧೨೮|||

ನಾಯ ನಡುಬೋನವನು ನೆಚ್ಚಿ ವೃ
ಥಾಯ ಕೆಡಬೇಡಾ ಯುಧಿಷ್ಠಿರ
ರಾಯನನು ಕರೆಸುವುದು ಭೀಷ್ಮಾದಿಗಳ ಮುಂದಿಟ್ಟು
ನ್ಯಾಯಮುಖದಲಿ ಸಕಲ ರಾಜ್ಯ
ಶ್ರೀಯನರ್ಧವನಿತ್ತು ಬದುಕುವು
ದಾಯತಿಕೆಯೊಳಗಹುದು ಚಿತ್ತೈಸೆಂದನಾ ವಿದುರ ||೧೨೯||

ಚಕ್ರವರ್ತಿಗಳಾರಲೇ ಭೂ
ಚಕ್ರದೋಳಗವರಿಗೆ ಮುರಾರಿಯ
ಚಕ್ರವೇ ಬೆಸಗೆಯ್ವುದಲ್ಲದೆ ಪಾಂಡು ತನಯರಿಗೆ
ಚಕ್ರಿ ತಾ ಬಂದವರ ಸೇವಾ
ಚಕ್ರದೊಳಗಿಹನಾ ಯುಧಿಷ್ಠಿರ
ಚಕ್ರವರ್ತಿಗದಾವನೈ ಸರಿಯೆಂದನಾ ವಿದುರ ||೧೩೦||

ನಳನೃಪತಿ ದಮಯಂತಿ ಸೀತಾ
ಲಲನೆ ರಾಘವದೇವ ದ್ರೌಪದಿ
ಕಲಿಯುಧಿಷ್ಠಿರದೇವನಿವರಿಂತಾರು ಮಾನಿಸರು
ಇಳೆಯೊಳುತ್ತಮ ಕೀರ್ತಿಘಳು ಜಾ
ವಳದ ಪುರುಷರೆ ಧರ್ಮಪುತ್ರನ
ಗೆಲುವ ಪರಿಯೆಂತೈ ಮಹಾದೇವೆಂದನಾ ವಿದುರ ||೧೩೧||

ಜನಪ ಕೇಳೈ ಸ್ಕಂದನನು ರಾ
ಮನನು ಹನುಮನ ಭೀಮಸೇನನ
ವಿನತೆಯಾತ್ಮಜನಿಂತಿದೈವರ ಭಾವಶುದ್ಧಿಯಲಿ
ನೆನೆದವರ ದುರಿತಂಗಳೋಡುವ
ವೆನಲು ನೀವೀ ಪವನಪುತ್ರನ
ನನುವರದೊಳೆಂತಕಟ ಜಯಿಸುವಿರೆಂದನಾ ವಿದುರ ||೧೩೨||

ಹರಿಹಯನು ಗುಹ ರಾಮ ಬಾಣಾ
ಸುರನು ದಶಶಿರ ಭೀಮಸೇನಾ
ದ್ಯರು ಕಣಾ ಗಿರಿಜಾಧಿನಾಥನ ಡಿಂಗರಿಗರಿವರು
ಸರಸವೇ ಮೃತ್ಯುಂಜಯನ ಕೂ
ಡರಸ ನಿನ್ನಳವರಿಯದೇ ಹರಿ
ಸುರರೊಡನೆ ಹಗೆಗೊಂಬನೇ ಧೃತರಾಷ್ಟ್ರ ಕೇಳೆಂದ ||೧೩೩||

ಬಲ ವಿಭೀಷಣ ಭೀಷ್ಮ ನಾರದ
ಫಲುಗುಣನು ಪ್ರಹ್ಲಾದದೇನನು
ಜಲರುಹಾಕ್ಷನ ನಚ್ಚು ಮೆಚ್ಚಿನ ಭಕುತರಿವರುಗಳು
ಸುಲಭವೇ ನಿನಗವರ ಕೂಡಣ
ಕಲಹ ಬೀಭತ್ಸುವಿನ ಕೈ ಮನ
ದಳವನರಿಯಾ ಕಂಡು ಕಾಣುತ ಮರುಳಹರೆಯೆಂದ ||೧೩೪||

ಎಲ್ಲಿ ಯೋಗಾಧಿಪತಿ ಮುರಹರ
ನೆಲ್ಲಿಯರ್ಜುನದೇವನಿಹನ
ಲಲ್ಲಿ ಜಯಸಿರಿಯಲ್ಲದೇ ಬೇರಿಲ್ಲ ಕೇಳಿದನು
ಬಲ್ಲವರು ಬಲ್ಲರು ಕಣಾ ನೀ
ನಿಲ್ಲಿ ಪಾಂಡು ಕುಮಾರರಿ ಸರಿ
ಯಲ್ಲ ಬಲ್ಲೈ ಹಿಂದೆ ಬಂದ ವಿಪತ್ಪರಂಪರೆಯ ||೧೩೫||

ಹಿಂದೆ ಗೋಗ್ರಹಣದಲಿ ದ್ರುಪದನ
ನಂದನೆಯ ವೈವಾಹದಲೀ ಬಳಿ
ಸಂದ ಗಂಧರ್ವಖನ ದೆಸೆಯಲಿ ಘೋಷಯಾತ್ರೆಯಲಿ
ಬಂದ ಭಂಗವ ಕಂಡು ಕಂಡೇ
ನೆಂದು ಪಾಂಡುಖುಮಾರರೊಡನನು
ಸಂಧಿಸುವೇ ಕಲಹವನು ಚಿತ್ತೈಸೆಂದನಾ ವಿದುರ ||೧೩೬||

ಸಕಲ ನೀತಿಯ ರಹಸ್ಯವನು ಸು
ವ್ಯಕುತವೆನಲರುಹಿದೆನು ತತ್ವಕೆ
ಯುಕುತಿಯಾದರೆ ನೆನೆವುದಿನ್ನು ಸನತ್ಸುಜಾತನನು
ಮುಕುತಿಗಮಳಬ್ರಹ್ಮವಿದ್ಯಾ
ಪ್ರಕಟವನು ಶೆರೆ ಮಾಡಿ ಚಿತ್ತದ
ವಿಕಳತೆಯನೊಡೆಮೆಟ್ಟಿ ಸಲಹುವನೆಂದು ಬೋಧಿಸಿದ ||೧೩೭||

ಸನತ್ಸುಜಾತ ನೀತಿ

ಅವಧರಿಸು ಪರತತ್ವ ವಿದ್ಯಾ
ವಿವರ ಭೇದವನನ್ಯಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ||೨||
ಒಬ್ಬನೇ ಬಲ್ಲವನು ಲೋಕದೊ
ಳಿಬ್ಬರಿಲ್ಲ ಸನತ್ಸುಜಾತನು
ಸರ್ವಗುಣಸಂಪೂರನಾತನ ಭಜಿಸಿದೊಡೆ ನೀನು
ಸಭ್ಯನಹೆಯೆನಲಾ ಮುನಿಯ ಕ
ರ್ತವ್ಯಭಾವನೆಯೊಳರಸನಿರಲಾ
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ ||೩||

ನೆನೆಯಲೊಡನೆ ಸನತ್ಸುಜಾತನು
ಮನೆಗೆಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಜನಿತವೆನಲರುಹಿದನು ಪರಲೋಕಸಾಧನವ ||೪||

ಚಿತ್ತವಿಸು ಧೃತರಾಷ್ಟ್ರ ನೃಪ ಪರ
ತತ್ವವಿದ್ಯಾವಿಷಯ ಭೇದವ
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು
ಉತ್ತಮಾಧಮವೆನ್ನದೇ ಕಾ
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ||೫||

ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಅಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿ ಓಷಧಿಗಳಿಂ
ದವತರಿಸಿತಾ ನಾದಿಪುರುಷ ಪ್ರಕೃತಿ ವಿಕೃತಿಗಳು ||೬||

ನೇತ್ರ ನಾಸಿಕ ಪಾದ ಪಾಣಿ
ಶೋತ್ರವೆಂಬಿವು ತಮ್ಮೊಳೊಂದೇ
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ||೭||

ಸೃಷ್ಟಿ ಸಂಹಾರದಲಿ ಭೂತದ
ಕಟ್ಟಳೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲಕರ್ಮವ
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳೆಂದ ||೮||

ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯಲಿ ಶೀಲತ್ವದಲಿ ವೆಂ
ಟಣಿಸಿ ರೇಚಕ ಪೂರಕದ ರಿಂ
ಗಣವನರಿವುದು ಯೋಗಸಿದ್ಧಿಗೆ ಲಕ್ಷಣವನೆಂದ ||೯||

ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಬಜಿಸದಿರಹೋರಾತ್ರಿಯಲಿ ಧರ್ಮವನೆ ಸಂಗ್ರಹಿಸು
ಭಜಿಸು ನಿತ್ಯಾನಿತ್ಯವಸ್ತುವ
ವಿಜಯನಹೆ ಇಹಪರಕೆ ತತ್ವದ
ನಿಜವಿದೆಲೆ ಧೃತರಾಷ್ಠ್ರ ಚಿತ್ತೈಸೆಂದನಾ ಮುನಿಪ ||||೧೦||

ಕಾಯವಿದು ನೆಲೆಯಲ್ಲ ಸಿರಿ ತಾ
ಮಾಯಾರೂಪಿನ ಮೃತ್ಯುದೇವತೆ
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿದು ಮಹಾತ್ಮರಿದಕೆ ಸ
ಹಾಯ ಧರ್ಮವ ರಚಿಸುವುದು ನಿ
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ||೧೧||

ಕೆಟ್ಟ ಮಾರ್ಗದಲಿಂದ್ರಿಯಂಗಳ
ಚಿಟ್ಟುಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ
ಹುಟ್ಟು ಸಾವಿನ ವಿಲಗದಲಿ ಕಂ
ಗೆಟ್ಟು ನಾನಾ ಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ ||೧೨||

ಹಲವು ವರ್ಣದೊಳೆಸೆವ ಗೋ ಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗಿ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ||೧೩||

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ ||೧೪||

ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀನನ್ಯರುಗಳಲ್ಲಿ
ಯುಕುತಿಯಿಂದದಮಾಡದಿರು ನಿ
ರ್ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ||೧೫||

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿ ಭ್ರಾಂತಿಯಲಿ ಮನ
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ
ದಂದುಗಂಬಡುತಿಹುದು ತತ್ವದ
ಹಿಂದುಮುಂದರಿಯದೆ ಮಹಾತ್ಮರು
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ||೧೬||

ಪ್ರಣವದೊಂದಾ ವರ್ಣಮೂರರ
ಗುಣವಿಡಿದು  ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ||೧೭||

ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿಜಾತಿಗಿ
ಳುಲಿವುವೈತಂದೊಂದು ವೃಕ್ಷವನೇರಿ ರಾತ್ರಯನು
ಕಕ್ಷೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರೀದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ||೧೮||

ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುಲೋಹಿತ
ರೇಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಖವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ||೧೯||

ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ಜ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಝೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ||೨೦||

ವಿದುರ ನೀತಿ

ವಿದುರ  ನೀತಿ ಬಂದನಾ ಧೃತರಾಷ್ಟ್ರರಾಯನ ಮಂದಿರಕೆ ಕಂಡನು ಮಹೀಷನ ನೊಂದೆರಡು ಮಾತಿನಲಿ ಸೂಚಿಸಿ ಮರಳಿದನು ಮನೆಗೆ ಅಂದಿನಿರುಳೊಳು ನಿದ್ರೆ ಬಾರದೆ ನೊಂದು ವಿದು...